ಹೈದರಾಬಾದ್: ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್, ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಮತ್ತು ಬಿಜೆಪಿ ನಡುವೆ ಒಳಒಪ್ಪಂದ ಏರ್ಪಟ್ಟಿದೆ. ಆ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ಆರೋಪಿಸಿದರು.
ಖಾನಾಪೂರ್‌ನಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಮತ್ತು ಬಿಆರ್‌ಎಸ್ ನಡುವೆ ಅಪ್ರಕಟಿತ ಒಪ್ಪಂದವಿದೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವನ್ನು ಬಿಆರ್‌ಎಸ್ ಬೆಂಬಲಿಸಿದೆ. ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮತ್ತು ಬಿಜೆಪಿಯ ನಡುವೆ ಹೊಂದಾಣಿಕೆ ಇದೆ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು’ ಎಂದರು.
ಒವೈಸಿ ಅವರು ಬೇರೆ ರಾಜ್ಯಗಳಲ್ಲಿ ತಮ್ಮ ಪಕ್ಷದ ಸಾಕಷ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ. ಆದರೆ ತೆಲಂಗಾಣದಲ್ಲಿ ಕೇವಲ ಒಂಬತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಇದರ ಅರ್ಥ ಅವರು ರಾಜ್ಯದಲ್ಲಿ ಬಿಆರ್‌ಎಸ್‌ಅನ್ನು ಬೆಂಬಲಿಸುತ್ತಾರೆ. ಕೇಂದ್ರದಲ್ಲಿ ಬಿಆರ್‌ಎಸ್, ಬಿಜೆಪಿಯನ್ನು ಬೆಂಬಲಿಸುತ್ತದೆ ಎಂದರು.
‘ನೀವು ಬಿಜೆಪಿಗೆ ಮತ ನೀಡಿದರೆ ಬಿಆರ್‌ಎಸ್‌ಗೆ ಮತ ನೀಡಿದಂತೆ. ಎಐಎಂಐಎಂಗೆ ಮತ ನೀಡಿದರೆ ಬಿಆರ್‌ಎಸ್‌ಗೆ ಮತ ನೀಡಿದಂತೆ. ಆ ಮೂರು ಪಕ್ಷಗಳು ಒಟ್ಟಾಗಿ ನಾಟು ನಾಟು (ಆರ್‌ಆರ್‌ಆರ್ ಚಿತ್ರದ ಹಾಡು) ನೃತ್ಯ ಮಾಡುತ್ತಿವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.