ಮುಂಬೈ: ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ 2019ರ ನಂತರ ನಾಲ್ಕು ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಿಗೆ ಮಹಾರಾಷ್ಟ್ರದ ರಾಜಭವನ ವೇದಿಕೆಯಾದಂತಾಗಿದೆ.
2019ರ ನವೆಂಬರ್‌ನಲ್ಲಿ ರಾಜಭವನದಲ್ಲಿ ಬೆಳ್ಳಂಬೆಳಗ್ಗೆ ನಡೆದಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡಣವೀಸ್, ಉಪ ಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಆಗ ಅಜಿತ್ ಪವಾರ್ ಅವರು ಎನ್‌ಸಿಪಿ ವಿಭಜಿಸಲು ವಿಫಲರಾಗಿದ್ದು, ಕೇವಲ 80 ಗಂಟೆ ಕಾಲ ಆ ಸರ್ಕಾರ ಅಸ್ತಿತ್ವದಲ್ಲಿತ್ತು.
ತಿಂಗಳ ತರುವಾಯ ಶಿವಸೇನೆ ನೇತೃತ್ವದಲ್ಲಿ ಶಿವಸೇನೆ–ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟ ‘ಮಹಾವಿಕಾಸ ಆಘಾಡಿ’ ಸರ್ಕಾರ ರಚನೆಯಾಗಿತ್ತು. ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಆದರೆ, ಶಿವಸೇನೆಯ ಏಕನಾಥ್ ಶಿಂದೆ ಅವರು 39 ಶಾಸಕರ ಬೆಂಬಲದೊಂದಿಗೆ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದು, ಸರ್ಕಾರ 2022ರ ಜೂನ್‌ನಲ್ಲಿ ಪತನವಾಗಿತ್ತು. ನಂತರದ ಬೆಳವಣಿಗೆಯಲ್ಲಿ ಜೂ.30ರಂದು ಶಿಂದೆ ಅವರು ಮುಖ್ಯಮಂತ್ರಿಯಾಗಿ, ಬಿಜೆಪಿಯ ದೇವೇಂದ್ರ ಫಡಣವೀಸ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಈಗ ಅಜಿತ್ ಪವಾರ್ ಮತ್ತೆ ಉಪ ಮುಖ್ಯಮಂತ್ರಿಯಾಗಿದ್ದಾರೆ. 2019ರಲ್ಲಿ ಮೊದಲ ಪ್ರಮಾಣ ವಚನ ನಡೆದಾಗ ಭಗತ್ ಸಿಂಗ್ ಕೋಶಿಯಾರಿ ರಾಜ್ಯಪಾಲರಾಗಿದ್ದರೆ, ಈಗ ಆ ಸ್ಥಾನದಲ್ಲಿ ರಮೇಶ್ ಬೈಸ್ ಇದ್ದಾರೆ.
2024ರಲ್ಲಿ ಲೋಕಸಭೆಯ ಚುನಾವಣೆಯ ಬಳಿಕ ಬಹುತೇಕ ಅಕ್ಟೋಬರ್ ವೇಳೆಗೆ ಮಹಾರಾಷ್ಟ್ರ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.