ವಿಜಯವಾಡ: ಭಾರಿ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರುವ ಆಂಧ್ರಪ್ರದೇಶದ 20 ಜನರ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಬುಧವಾರ ಘೋಷಿಸಿದ್ದಾರೆ.
ರಾಜ್ಯದಾದ್ಯಂತ ಮಳೆಯಿಂದ ತೊಂದರೆಗೆ ಸಿಲುಕಿರುವ ಜನರ ಸಂಖ್ಯೆ 6.44 ಲಕ್ಷಕ್ಕೆ ಏರಿಕೆಯಾಗಿದ್ದು, 193 ಕಾಳಜಿ ಕೇಂದ್ರಗಳಲ್ಲಿ 42,707 ಜನರಿಗೆ ಆಶ್ರಯ ನೀಡಲಾಗಿದೆ. ರಾಜ್ಯದಲ್ಲಿ ತೀವ್ರ ಬಾಧಿತ ಪ್ರದೇಶವಾಗಿರುವ ವಿಜಯವಾಡದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಮುಂದುವರಿದಿವೆ.
ಮೃತರ ದೇಹಗಳನ್ನು ಅವರ ಕುಟುಂಬದವರಿಗೆ ನೀಡಿ, ಅಂತ್ಯಕ್ರಿಯೆ ನೆರವೇರಿಸಲು ನೆರವಾಗುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಟೆಲಿಕಾನ್ಫರೆನ್ಸ್ ಮೂಲಕ ಸೂಚನೆ ನೀಡಿದ್ದಾರೆ.
ಸಂಕಷ್ಟದಲ್ಲಿ ಸಿಲುಕಿರುವವರಿಗೆ ಅತ್ಯಗತ್ಯವಾದ ನೀರು, ಹಾಲು, ಹಣ್ಣು, ಬಿಸ್ಕತ್ತು ಸೇರಿದಂತೆ ಇತರ ವಸ್ತುಗಳನ್ನು ಒದಗಿಸಬೇಕು. ‘ಮೊಬೈಲ್ ಮಾರುಕಟ್ಟೆ’ಗಳ ವ್ಯವಸ್ಥೆ ಮಾಡಿ, ಕಡಿಮೆ ಬೆಲೆಗೆ ತರಕಾರಿಗಳು ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅವರು ನಿರ್ದೇಶಿಸಿದ್ದಾರೆ.
ವೈರಾಣು ಜ್ವರ ಹರಡುವ ಭೀತಿ ಇರುವ ಕಾರಣ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ವೈದ್ಯಕೀಯ ಶಿಬಿರಗಳನ್ನು ತೆರೆದು ಅಗತ್ಯ ಚಿಕಿತ್ಸಾ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆಯೂ ಅವರು ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ 2.3 ಲಕ್ಷ ಉಪಾಹಾರ ಪಾಕೆಟ್‌ಗಳನ್ನು, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 4.5 ಲಕ್ಷ ಆಹಾರ ಪಾಕೆಟ್‌ಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಲ್ಕನೇ ದಿನವೂ ವಿದ್ಯುತ್ ಇಲ್ಲ: ಧಾರಾಕಾರ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿರುವ ವಿಜಯವಾಡದಲ್ಲಿ ನಾಲ್ಕನೇ ದಿನವಾದ ಬುಧವಾರವೂ ವಿದ್ಯುತ್ ಸಂಪರ್ಕ ಇರಲಿಲ್ಲ. ನಗರದ ಬಹುತೇಕ ಭಾಗ ಜಲಾವೃತವಾಗಿರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ. ಇನ್ನೂ ಎರಡು ದಿನ ವಿದ್ಯುತ್ ಪೂರೈಕೆಯಾಗುವ ಲಕ್ಷಣಗಳಿಲ್ಲ ಎಂದು ಇಲ್ಲಿನ ಅಜಿತ್ ಸಿಂಗ್ ನಗರದ ನಿವಾಸಿಯೊಬ್ಬರು ಹೇಳಿದರು.
* ರಾಜ್ಯದಾದ್ಯಂತ 3,312 ಕಿ.ಮೀ ರಸ್ತೆಗೆ ಹಾನಿ
* 1.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕೃಷಿ ಬೆಳೆ ನಾಶ