ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫಿರಂಗಿ ದಳದ ಸಾಮರ್ಥ್ಯ ಹೆಚ್ಚಳ: ಚೀನಾ ಗಡಿ ಸಮೀಪ ಭಾರತ ಸೇನೆಯ ಯುದ್ಧ ಸನ್ನದ್ಧತೆ

Published : 27 ಸೆಪ್ಟೆಂಬರ್ 2024, 16:09 IST
Last Updated : 27 ಸೆಪ್ಟೆಂಬರ್ 2024, 16:09 IST
ಫಾಲೋ ಮಾಡಿ
Comments

ನವದೆಹಲಿ: ಚೀನಾ ಗಡಿಯಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನೆಯ ಫಿರಂಗಿ ದಳವು ಅತ್ಯಾಧುನಿಕ ಯುದ್ಧ ಸಾಮಗ್ರಿಗಳನ್ನು ಹೊಂದುವ ಮೂಲಕ ತನ್ನ ಸಾಮರ್ಥ್ಯ ಹೆಚ್ಚಿಸುತ್ತಿದೆ. 

‘ಕೆ–9 ವಜ್ರ’ ಯುದ್ಧ ಟ್ಯಾಂಕ್‌ಗಳ ಸಂಖ್ಯೆ ಹೆಚ್ಚಿಸುವುದು, ಡ್ರೋನ್‌ಗಳ ನಿಯೋಜನೆ ಮತ್ತು ಕಣ್ಗಾವಲು ವ್ಯವಸ್ಥೆಗೆ ಅತ್ಯಾಧುನಿಕ ಸಲಕರಣೆಗಳ ಬಳಕೆಗೆ ನಿರ್ಧರಿಸಲಾಗಿದೆ.

‘ರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಸವಾಲುಗಳನ್ನು ಮನಗಂಡು ಫಿರಂಗಿ ದಳದ ಸಾಮರ್ಥ್ಯವನ್ನು ಹೆಚ್ಚಿಸಲು ವಿವಿಧ ಯುದ್ಧ ಸಲಕರಣೆಗಳನ್ನು ಖರೀದಿಸಲಾಗುತ್ತಿದೆ’ ಎಂದು ಸೇನೆಯ ಫಿರಂಗಿ ದಳದ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅದೋಷ್ ಕುಮಾರ್ ತಿಳಿಸಿದ್ದಾರೆ.

‘ಫಿರಂಗಿ ದಳವನ್ನು ನಾವು ಹಿಂದೆಂದೂ ಕಾಣದಂತಹ ವೇಗದಲ್ಲಿ ಅಧುನೀಕರಣಗೊಳಿಸುತ್ತಿದ್ದೇವೆ’ ಎಂದು ಆರ್ಟಿಲರಿ ರೆಜಿಮೆಂಟ್‌ನ (ಫಿರಂಗಿ ದಳ) 198ನೇ ವರ್ಷಾಚರಣೆ ಅಂಗವಾಗಿ ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಸೇನೆಯು ಈಗಾಗಲೇ 100 ರಷ್ಟು ಕೆ–9 ವಜ್ರ ಯುದ್ಧ ಟ್ಯಾಂಕ್‌ಗಳನ್ನು ನಿಯೋಜಿಸಿದ್ದು, ಇನ್ನೂ 100 ಯುದ್ಧ ಟ್ಯಾಂಕ್‌ಗಳ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಾರಂಗ್‌ ಮತ್ತು ಧನುಷ್‌ ಸೇರಿದಂತೆ 155 ಎಂಎಂ ಗನ್‌ ಸಿಸ್ಟಮ್‌ಗಳನ್ನೂ ಗಡಿ ಭಾಗದಲ್ಲಿ ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಹೈಪರ್‌ಸಾನಿಕ್‌ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು. ಹೈಪರ್‌ಸಾನಿಕ್‌ ಕ್ಷಿಪಣಿಗಳು ಶಬ್ದದ ವೇಗಕ್ಕಿಂತ ಸುಮಾರು ಐದು ಪಟ್ಟು ಅಧಿಕ ವೇಗದಲ್ಲಿ ಸಾಗಬಲ್ಲದು.

‘ಪಿನಾಕಾ: 300 ಕಿ.ಮೀ ವ್ಯಾಪ್ತಿ ಗುರಿ’

‘ಆತ್ಮನಿರ್ಭರ ಭಾರತ ಪರಿಕಲ್ಪನೆಯ ಯಶಸ್ಸಿನ ಕಥೆಯಾಗಿರುವ ‘ಪಿನಾಕಾ’ ರಾಕೆಟ್‌ಗಳ ಗುರಿ ತಲುಪುವ ಸಾಮರ್ಥ್ಯವನ್ನು 300 ಕಿ.ಮೀ ಗಳಿಗೆ ಹೆಚ್ಚಿಸುವತ್ತ ಗಮನ ಕೇಂದ್ರೀಕರಿಸಲಾಗಿದೆ’ ಎಂದು ಅದೋಷ್‌ ಕುಮಾರ್‌ ತಿಳಿಸಿದರು. ಈಗ ಸೇನೆಯ ಬಳಿಯಿರುವ ಪಿನಾಕಾ ಮಾರ್ಕ್-1 ರಾಕೆಟ್‌ ಗರಿಷ್ಠ 40 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದರೆ ಪಿನಾಕಾ ಮಾರ್ಕ್-2 ರಾಕೆಟ್‌ 90 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT