ಭೇಟಿ ವೇಳೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದ್ದು, ಈ ಭಾಗದ ಹಲವು ಸಮಸ್ಯೆಗಳ ಕುರಿತು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುವ ನಿರೀಕ್ಷೆಯಿದೆ. ಜಮ್ಮು ವಿಭಾಗದಲ್ಲಿ ಬಿಜೆಪಿಯು 43 ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಪಕ್ಷದ ಕೆಲವು ಮುಖಂಡರು ಬಂಡಾಯ ಸಾರಿದ್ದರು, ಕೆಲವರು ಪ್ರತಿಭಟನೆ ನಡೆಸಿದ್ದರು. ಮೋದಿ ಭೇಟಿ ಮೂಲಕ ಈ ಬಂಡಾಯವೂ ತಣ್ಣಗಾಗಲಿದೆ ಎಂದು ಸ್ಥಳೀಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ’ತಳಮಟ್ಟದಲ್ಲಿ ಕಾರ್ಯಕರ್ತರು ತಮ್ಮ ಶ್ರಮವನ್ನು ದುಪ್ಪಟ್ಟುಗೊಳಿಸಿ ಅಕ್ರಮಣಕಾರಿಯಾಗಿ ಕೆಲಸ ಮಾಡಬೇಕು ಎಂದು ಸಂದೇಶ ರವಾನಿಸಲಾಗಿದೆ. ಮೋದಿ ಹಾಗೂ ರಾಷ್ಟ್ರಮಟ್ಟದ ನಾಯಕರು ಹೆಚ್ಚಿನ ಶ್ರಮವಹಿಸುತ್ತಿದ್ದು, ನಾವು ಅವರ ಕೆಲಸವನ್ನು ಪ್ರಶಂಸಿಸಬೇಕು’ ಎಂದು ರಾಜ್ಯದ ಬಿಜೆಪಿ ಮುಖಂಡರೊಬ್ಬರು ತಿಳಿಸಿದರು. ‘ಜಮ್ಮು ಭಾಗದಲ್ಲಿ ಬಿಜೆಪಿಯು 2014ರ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು, ಈ ಭಾರಿ 40ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದೆ’ ಎಂದರು.