ಬೆಂಗಳೂರಿನ ರಸ್ತೆಗಳು, ಟ್ರಾಫಿಕ್, ಎಲ್ಲೆಡೆ ಕಣ್ಣಿಗೆ ರಾಚುವ ಕಸದ ರಾಶಿಯ ಗಬ್ಬುನಾತ... ಇವುಗಳಿಂದ ಕೆಲವು ದಿನವಾದರೂ ದೂರವಿರಲೆಂದು ನಾವು ಆರಿಸಿಕೊಂಡದ್ದು ಅಸ್ಸಾಂ ಮೇಘಾಲಯದ ಒಂದು ವಾರದ ಪ್ರವಾಸ. ಈ ಪ್ರವಾಸದಲ್ಲಿ ನಾವು ಭೇಟಿ ಕೊಡುವ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ‘ಮಾವ್ಲಿನ್ನಾಂಗ್’ ಬಗೆಗೆ ನನಗೆ ಬಹಳವೇ ಕುತೂಹಲವಿತ್ತು.

‘ಏಷ್ಯಾದ ಅತ್ಯಂತ ಸ್ವಚ್ಛ ಹಳ್ಳಿ’ ಎಂದು ಹೆಸರು ಪಡೆದಿರಬೇಕಾದರೆ ಅದಿನ್ನೆಂಥ ಪರಿಸರ ಹೊಂದಿರಬಹುದು ಎನ್ನುವುದೇ ಆ ಕುತೂಹಲಕ್ಕೆ ಕಾರಣವಾಗಿತ್ತು.

ಶಿಲ್ಲಾಂಗ್ನಿಂದ ಹೊರಟು ನಡುವೆ ಭಾರತ ಬಾಂಗ್ಲಾ ಗಡಿ ಪ್ರದೇಶ ಮತ್ತು ಸ್ಫಟಿಕ ಸದೃಶ ನೀರನ್ನು ಹೊಂದಿರುತ್ತದೆ ಎನ್ನಲಾದ ಡಾವ್ಕಿ ನದಿಯನ್ನು ನೋಡಿ (ಎರಡು ದಿನದ ಹಿಂದೆ ಮಳೆ ಬಂದಿದ್ದರಿಂದ ನೀರು ತೀರಾ ಸ್ವಚ್ಛವಾಗಿ ಇರಲಿಲ್ಲ) ಮಾವ್ಲಿನ್ನಾಂಗ್ ತಲುಪಿದಾಗ ಸಂಜೆ ನಾಲ್ಕೂವರೆ ಗಂಟೆಯ ಸಮಯ. ನಮ್ಮ ಸಹ ಪ್ರಯಾಣಿಕರಲ್ಲಿ ಕೆಲವರಿಗೆ ‘ಒಂದು ಹಳ್ಳಿಯನ್ನು ನೋಡಲು ಇಷ್ಟು ದೂರ ಬರಬೇಕಿತ್ತೇ?’ ಎನ್ನುವ ಅಸಮಾಧಾನ!

ಹಳ್ಳಿಯ ಹೊರಗೆ ಇರುವ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿ ಮುಂದೆ ಸಾಗಿದರೆ ‘ಏಷ್ಯಾದ ಅತ್ಯಂತ ಸ್ವಚ್ಛ ಹಳ್ಳಿ, ದೇವರ ಸ್ವಂತ ಉದ್ಯಾನಕ್ಕೆ ಸ್ವಾಗತ’ ಎಂಬ ಬರಹವಿರುವ ಫಲಕ ಕಾಣಿಸುತ್ತದೆ. ಅಲ್ಲಿಂದ ಮುಂದೆ ನಡೆದರೆ ಕಸ ಕಡ್ಡಿಗಳ ಸುಳಿವಿಲ್ಲದ ಸುಂದರ ರಸ್ತೆಗಳು, ರಸ್ತೆಯ ಬದಿಯಲ್ಲಿ ಬಿದಿರಿನ ಬೇಲಿಯೊಳಗೆ, ಅಚ್ಚುಕಟ್ಟಾಗಿ ನಿರ್ವಹಿಸಲಾದ ಹೂಗಿಡಗಳು, ಸಾಲು ಮರಗಳು, ಕೂರುವ ಸಲುವಾಗಿ ಅಲ್ಲಲ್ಲಿ ಹಾಕಿರುವ ಆಸನಗಳು, ಕೆಲವೆಡೆ ನೆರಳಿಗಾಗಿ ಮಂಟಪಗಳು ಕಾಣಬರುತ್ತವೆ. ಇವೆಲ್ಲವು ಪರಿಸರಸ್ನೇಹಿ ವಸ್ತುಗಳಾದ ಬಿದಿರು, ಮರಮುಟ್ಟು ಹಾಗೂ ಹುಲ್ಲಿನಿಂದ ಮಾಡಿರುವಂತಹವು. ನೋಡಲು ಆಕರ್ಷಕವಾಗಿದ್ದು, ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.

ಮನೆಗಳಿಗೆ ಹೋಗುವ ಕಿರುದಾರಿಗಳೂ ಶುಭ್ರತೆಯ ಪ್ರತೀಕವೇ ಆಗಿರುವುದು ವಿಶೇಷ. ಅಲ್ಲಲ್ಲಿ ಇರಿಸಿರುವ ಕಸದ ಬುಟ್ಟಿಗಳೂ ಬಿದಿರಿನಿಂದ ಮಾಡಲಾಗಿದ್ದು, ನೋಡಲು ಮೋಹಕವಾಗಿವೆ. ಈ ಹಳ್ಳಿಯ ಮನೆಗಳೂ ಸರಳ ರಚನೆಯನ್ನು ಹೊಂದಿದ್ದು ಆಡಂಬರಕ್ಕೆ ಪ್ರಾಮುಖ್ಯವಿಲ್ಲ.

ಜನರೂ ಶ್ರಮಜೀವಿಗಳು. ತಮ್ಮ ಪಾಡಿಗೆ ತಾವಿರುವ, ಮುಗ್ಧತೆಯನ್ನು ಹೊಂದಿರುವವರು ಎನ್ನುವುದು ಮೇಲ್ನೋಟಕ್ಕೇ ಕಾಣಿಸುತ್ತದೆ. ಅತ್ತಿತ್ತ ನೋಡುತ್ತಾ ಆ ಸುಂದರ ಬೀದಿಗಳಲ್ಲಿ ನಡೆಯುವುದೇ ಅಪೂರ್ವ ಅನುಭೂತಿ. ಹೀಗೆಯೆ ಮುಂದೆ ಸಾಗಿದರೆ ಹಳ್ಳಿಯ ಪ್ರಮುಖ ಆಕರ್ಷಣೆಯಾದ ಬಿದಿರಿನ ಸೇತುವೆಯ ಬಳಿ ಬರುತ್ತೇವೆ. ರಸ್ತೆಯ ಎರಡೂ ಬದಿಯಲ್ಲಿರುವ ದೊಡ್ಡ ಮರಗಳ ನಡುವೆ ಬಿದಿರಿನಿಂದ ಮಾಡಲಾದ ಸೇತುವೆ, ಒಂದು ಬದಿಯಲ್ಲಿ ಎತ್ತರದಲ್ಲಿರುವ ಚಿಕ್ಕ ಮಂಟಪ ಗಮನ ಸೆಳೆಯುತ್ತವೆ.

ಒಂದು ಕಡೆ ಸುಮಾರು ಇಪ್ಪತ್ತು ಅಡಿ, ಮತ್ತೊಂದು ಕಡೆ ಮೂವತ್ತು ಅಡಿಗೂ ಮೀರಿ ಇಳಿಜಾರಾಗಿ ಸಾಗುವ ಈ ಸೇತುವೆಯ ಮೇಲಿನ ನಡಿಗೆ ವಿಭಿನ್ನ ಅನುಭವ ಕೊಡುತ್ತದೆ. ಇಪ್ಪತ್ತು ರೂಪಾಯಿ ಪಾವತಿಸಿ ಆ ಸೇತುವೆ ಮೇಲೆ ಹೋಗಿ ಬರಬಹುದು. ಮೇಲಿನಿಂದ ಹಳ್ಳಿಯ ವಿಹಂಗಮ ನೋಟವೂ ಲಭ್ಯ. ಮತ್ತೊಂದೆಡೆ 85 ಅಡಿಯ ಬಿದಿರಿನ ಏಣಿಯನ್ನು ಹತ್ತಿ ಸೂರ್ಯಾಸ್ತವನ್ನು ನೋಡುವ ಅನುಭವವೂ ಅನನ್ಯವಾದದ್ದು. ಇಲ್ಲಿಂದ ಬಾಂಗ್ಲಾ ಗಡಿಯ ನೋಟವೂ ಲಭ್ಯ.

ಎಷ್ಟೇ ಪ್ರವಾಸಿಗರು ಬರಲಿ, ಯಾವ ಉಸಾಬರಿಗೂ ಹೋಗದೆ ತಮ್ಮ ಪಾಡಿಗೆ ತಾವಿರುವ ಜನರನ್ನು ನೋಡುವುದೇ ಒಂದು ಅಚ್ಚರಿ. ಅವರನ್ನು ಮಾತನಾಡಿಸಲು ಭಾಷೆಯ ಅಡಚಣೆ. ನಮ್ಮ ಹಿಂದಿ ಅವರಿಗೆ ಅರ್ಥವಾಗುವುದಿಲ್ಲ, ಅವರ ಖಾಸಿ ಭಾಷೆ ನಮಗೆ ತಿಳಿಯದು. ಆದರೆ ವ್ಯಾಪಾರಕ್ಕೆ ನಿಂತ ಒಂದಷ್ಟು ಮಂದಿ ಅದಕ್ಕೆ ತಕ್ಕಷ್ಟು ಇಂಗ್ಲಿಷನ್ನು ಬಲ್ಲರು. ಹಳ್ಳಿಯಿಡೀ ಸುತ್ತಾಡಿ ಮರಳಿ ಹೊರಟಾಗ ಅಲ್ಲಿನ ಪ್ರಕೃತಿಯ ಸೌಂದರ್ಯ, ಕೃತ್ರಿಮವಿಲ್ಲದ ಜನರ ನಡವಳಿಕೆ ನಮ್ಮ ಮನದಲ್ಲಿ ಉಳಿಯುವುದು ನಿಶ್ಚಿತ. ಮೊದಮೊದಲು ಅಲ್ಲೇನು ಹೋಗಿ ನೋಡುವುದು ಎಂದವರೂ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿಗೊಂಡಿದ್ದು ನೋಡಿ ಬಂದದ್ದು ಸಾರ್ಥಕವಾಯಿತು ಎಂದು ನಮ್ಮೆಲ್ಲರಿಗೆ ಸಂತಸವಾಗಿದ್ದು ಹೌದು! ಕೆಲವು ಸ್ಥಳಗಳು ಫೋಟೊಗಳಲ್ಲಷ್ಟೇ ಉಳಿಯುವುದಿಲ್ಲ. ಅವು ನಮ್ಮ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯುತ್ತವೆ. ಒಟ್ಟಾರೆ ಒಂದು ಅಪೂರ್ವ, ಅವಿಸ್ಮರಣೀಯ ಪ್ರವಾಸ ನಮ್ಮದಾಗಿತ್ತು.

ಮಾವ್ಲಿನ್ನಾಂಗ್ ಗ್ರಾಮ ಶಿಲ್ಲಾಂಗ್ನಿಂದ 76 ಕಿಲೋ ಮೀಟರ್ ಮತ್ತು ಚಿರಾಪುಂಜಿಯಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಜೀವಂತ ಮರದ ಬೇರಿನ ಸೇತುವೆ ಇರುವ ರಿವಾಯ್ ಹಳ್ಳಿ ಇಲ್ಲಿಂದ 2.50 ಕಿ.ಮೀ. ದೂರವಿದೆ.

ಮಾವ್ಲಿನ್ನಾಂಗ್ ಕುರಿತು...

ಸುಮಾರು ನೂರು ವರ್ಷಗಳ ಹಿಂದಿನಿಂದಲೂ ಸ್ವಚ್ಛತೆಯನ್ನು ಕಾಯ್ದುಕೊಂಡು ಬರುತ್ತಿರುವ, ಪೂರ್ವ ಭಾರತದ ಮೇಘಾಲಯ ರಾಜ್ಯದ ಮಾವ್ಲಿನ್ನಾಂಗ್ ಗ್ರಾಮವು ಭಾರತದ ಅತ್ಯಂತ ಸ್ವಚ್ಛವಾದ ಹಳ್ಳಿ ಎಂದು ಪ್ರಸಿದ್ಧವಾಗಿದೆ.

ಡಿಸ್ಕವರ್ ಇಂಡಿಯಾ ನಿಯತಕಾಲಿಕೆಯು ಇದನ್ನು 2003ರಲ್ಲಿ ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಮತ್ತು 2005ರಲ್ಲಿ ಭಾರತದಲ್ಲಿ ಅತ್ಯಂತ ಸ್ವಚ್ಛ ಗ್ರಾಮ ಎಂದು ಘೋಷಿಸಿತು. ಪ್ರಧಾನಿ ಮೋದಿಯವರು ತಮ್ಮ ‘ಮನ್ ಕಿ ಬಾತ್’ ರೇಡಿಯೊ ಭಾಷಣದಲ್ಲಿ ಮಾವ್ಲಿನ್ನಾಂಗ್ ಅನ್ನು ಮೇಘಾಲಯದ ಅತ್ಯಂತ ಸ್ವಚ್ಛ ಗ್ರಾಮ ಮತ್ತು ದೇಶದ ಉಳಿದ ಪ್ರದೇಶಗಳಿಗೆ ಮಾದರಿ ಎಂದು ಘೋಷಿಸಿದರು.

ಮೇಘಾಲಯದಲ್ಲಿರುವ ಅಪೂರ್ವ ಖಾಸಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಮಾವ್ಲಿನ್ನಾಂಗ್, ಪರಿಶುದ್ಧ ಬೀದಿಗಳು, ಸಮುದಾಯವನ್ನು ಒಳಗೊಂಡ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರಸ್ನೇಹಿ ಜೀವನಶೈಲಿಗಾಗಿ ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಎಂದು ಪ್ರಸಿದ್ಧವಾಗಿದೆ. ಧೂಮಪಾನ ಮತ್ತು ಪ್ಲಾಸ್ಟಿಕ್ ಅನ್ನು ಇಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮಕ್ಕಳು ವಯಸ್ಕರೆನ್ನದೆ ಎಲ್ಲರೂ ಬೀದಿಗಳನ್ನು ಗುಡಿಸುತ್ತಾರೆ. ಉದ್ಯಾನಗಳನ್ನು ಮತ್ತು ತಮ್ಮ ಮನೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.

ಸುಮಾರು ಒಂದು ನೂರಕ್ಕೂ ಮಿಕ್ಕಿ ಮನೆಗಳಿರುವ, ಒಂದು ಸಾವಿರದ ಒಳಗಿನ ಜನಸಂಖ್ಯೆಯನ್ನು ಹೊಂದಿರುವ ಮಾವ್ಲಿನ್ನಾಂಗ್ನ ಖಾಸಿ ಸಮುದಾಯವು ಮಾತೃವಂಶೀಯವಾಗಿದ್ದು, ಆಸ್ತಿ ಮತ್ತು ಕುಟುಂಬದ ವಂಶಾವಳಿಯು ತಾಯಿಯಿಂದ ಮಗಳಿಗೆ ವರ್ಗಾಯಿಸಿದವಾಗಿವೆ. ಮದುವೆಯ ನಂತರ ಗಂಡನು ತನ್ನ ಹೆಂಡತಿಯ ಮನೆಗೆ ಹೋಗುತ್ತಾನೆ! ಖಾಸಿ ಸಂಸ್ಕೃತಿಯು ಪ್ರಕೃತಿಯೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ. ಸ್ಥಳೀಯ ಸಂಪ್ರದಾಯ ಮತ್ತು ಆಚರಣೆಗಳನ್ನು ಹೊಂದಿದ್ದರೂ, ಹೆಚ್ಚಿನ ಖಾಸಿ ಜನರು ತಮ್ಮನ್ನು ಕ್ರಿಶ್ಚಿಯನ್ನರು ಎಂದು ಕರೆದುಕೊಳ್ಳುತ್ತಾರೆ. ಜೀವನೋಪಾಯಕ್ಕಾಗಿ ಕೃಷಿ ಮತ್ತು ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿರುವ ಈ ಜನರು ತಮಗೇ ವಿಶಿಷ್ಟವಾಗಿರುವ ಖಾಸಿ ಭಾಷೆಯಲ್ಲಿ ಸಂವಹನ ನಡೆಸುತ್ತಾರೆ. ಸಾಕ್ಷರತೆಯ ಪ್ರಮಾಣ ನೂರಕ್ಕೆ ನೂರರಷ್ಟು ಎನ್ನುವುದೂ ಇಲ್ಲಿನ ಹೆಚ್ಚುಗಾರಿಕೆ.

ಈ ಹಳ್ಳಿಯು ಸ್ವಚ್ಛತೆ ಮತ್ತು ನೈರ್ಮಲ್ಯದ ಮಾದರಿಯಾಗಲು ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಸ್ವಚ್ಛತೆಯ ಅಭ್ಯಾಸವನ್ನು ತಿಳಿಸಿಕೊಡುವುದರಿಂದ ಇದು ಸಾಧ್ಯವಾಗಿದೆ ಎನ್ನುವ ಉತ್ತರ ಸಿಗುತ್ತದೆ. ನೂರು ವರ್ಷಗಳ ಹಿಂದೆ ಇಲ್ಲಿ ಕಾಲರಾ ಹರಡುವಿಕೆಯಿಂದ ಉದ್ಭವವಾದ ಸಮಸ್ಯೆ ಶುಚಿತ್ವವನ್ನು ಪ್ರೋತ್ಸಾಹಿಸಲು ಕಾರಣವಾಗಿರಬಹುದು ಎಂದು ಹಿರಿಯರು ಅಭಿಪ್ರಾಯಪಡುತ್ತಾರೆ. ಕ್ರಿಶ್ಚಿಯನ್ ಮಿಷನರಿಗಳು ಸಹ ಈ ದಿಸೆಯಲ್ಲಿ ಸಾಕಷ್ಟು ಸಹಾಯ ಮಾಡಿದ್ದಾರೆ.

ಮಾವ್ಲಿನ್ನಾಂಗ್ನಲ್ಲಿ ಸುಂದರವಾದ ಶಂಕುವಿನಾಕಾರದ ಬಿದಿರಿನ ಬುಟ್ಟಿಗಳನ್ನು ಕಸದ ತೊಟ್ಟಿಗಳಾಗಿ ಇರಿಸಲಾಗಿದೆ. ಸಾವಯವ ತ್ಯಾಜ್ಯವನ್ನು ಸುಡಬಹುದಾದ ಕಸದಿಂದ ಬೇರ್ಪಡಿಸಿ ಎಲೆಗಳು ಮತ್ತು ಇತರ ಜೈವಿಕ ತ್ಯಾಜ್ಯವನ್ನು ಹೂಳಲಾಗುತ್ತದೆ. ನಂತರ ಇದನ್ನು ಗೊಬ್ಬರವಾಗಿ ಬಳಸಲಾಗುತ್ತದೆ. ಉಳಿದೆಲ್ಲವನ್ನೂ ಹಳ್ಳಿಯಿಂದ ದೂರಕ್ಕೆ ಒಯ್ದು ಸುಡಲಾಗುತ್ತದೆ.

ಮಾವ್ಲಿನ್ನಾಂಗ್ ಹಳ್ಳಿಯೊಳಗಿನ ನಡಿಗೆ ನಂಬಲಾಗದಷ್ಟು ಆಹ್ಲಾದಕರವಾಗಿದೆ. ಈ ಗ್ರಾಮವನ್ನು ಅದರ ಪ್ರಶಾಂತ ವಾತಾವರಣಕ್ಕಾಗಿ ‘ದೇವರ ಸ್ವಂತ ಉದ್ಯಾನ’ ಎಂದು ಕರೆಯಲಾಗುತ್ತದೆ. ಸುಸ್ಥಿರ ಪ್ರವಾಸೋದ್ಯಮ ಮತ್ತು ಪರಿಸರ ಕಾಳಜಿಗೆ ಈ ಹಳ್ಳಿಯನ್ನು ಉದಾಹರಿಸಲಾಗುತ್ತದೆ.

‘ಒಂದು ಮಾವ್ಲಿನ್ನಾಂಗ್ ಹಳ್ಳಿಯು ಸುಂದರವಾಗಿ ಕಾಣುವಾಗ ಯಾವುದೇ ಮುಖಗವಸುಗಳ ಅಗತ್ಯವಿಲ್ಲ. ಹೊರಗೆ ಸ್ವಚ್ಛತೆ ಇದ್ದಾಗ, ಒಳಗೆ ಪ್ರಶಾಂತತೆಯ ಭಾವನೆಯನ್ನು ಅನುಭವಿಸುತ್ತೇವೆ’ ಎಂದು ಇಲ್ಲಿಗೆ ಭೇಟಿ ಕೊಟ್ಟ ಖ್ಯಾತ ಕ್ರಿಕೆಟಿಗ ಸಚಿನ್ ಟೆಂಡೂಲ್ಕರ್ ಹೇಳುತ್ತಾರೆ.

(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.