ನವದೆಹಲಿ: ಈಶಾನ್ಯ ಭಾರತದ ಹೆಬ್ಬಾಗಿಲು ಅಸ್ಸಾಂ ರಾಜ್ಯದಲ್ಲಿ ಮೂವರು ಗೊಗೊಯ್ಗಳು ಈ ಸಲ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಕಠಿಣ ಸವಾಲಿನ ಚುನಾವಣಾ ಕಣದಲ್ಲಿ ತ್ರಿಮೂರ್ತಿಗಳು ಮ್ಯಾಜಿಕ್ ಮಾಡುವರೇ?

ಅಸ್ಸಾಂನಲ್ಲಿ ಕಾಂಗ್ರೆಸ್ಗೆ ಪುನರುಜ್ಜೀವನ ನೀಡಿದವರು ತರುಣ್ ಗೊಗೊಯ್. ಅವರು 2001ರಿಂದ 2016ರ ವರೆಗೆ ಮುಖ್ಯಮಂತ್ರಿಯಾಗಿದ್ದರು. ರಾಜ್ಯದಲ್ಲಿ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ಹೆಗ್ಗಳಿಕೆ ಅವರಿಗೆ ಇದೆ. ಆಕ್ರಮಣಕಾರಿ ರಾಜಕಾರಣ ನಡೆಸಿರುವ ಬಿಜೆಪಿಯು 2016ರಿಂದ ಗೆಲ್ಲುತ್ತಲೇ ಬಂದಿದೆ. ಈ ಬಾರಿಯೂ ಕೇಸರಿ ಪಕ್ಷವು ದಿಗ್ವಿಜಯ ಸಾಧಿಸುವ ಹುಮ್ಮಸ್ಸು- ಆತ್ಮವಿಶ್ವಾಸದಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಮತ್ತು ಸ್ಥಳೀಯ ಪಕ್ಷಗಳೊಂದಿಗೆ ಜಾಣತನದ ಗೆಳೆತನ ಬೆಳೆಸುವ ಹಾಗೂ ವಿರೋಧಿ ಬಣಗಳ ಅತೃಪ್ತ ನಾಯಕರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಮೂಲಕ ಕಾಂಗ್ರೆಸ್ ಬೇರುಗಳನ್ನು ಕಿತ್ತೆಸೆಯುವ ಉಮೇದಿನಲ್ಲಿದೆ. ಪ್ರಮುಖ ನಾಯಕರ ಪಕ್ಷಾಂತರದಿಂದ ನಲುಗಿರುವ ಕೈ ಪಾಳಯವು ಮೂವರು ಗೊಗೊಯ್ಗಳನ್ನು ನೆಚ್ಚಿಕೊಂಡಿದೆ.

2021ರ ವಿಧಾನಸಭೆ ಚುನಾವಣೆಯಲ್ಲಿ ಈ ಮೂವರು ಗೊಗೊಯ್ಗಳು ಪ್ರತ್ಯೇಕವಾಗಿ ಚುನಾವಣೆ ಸ್ಪರ್ಧಿಸಿದ್ದರು. ಈ ಸಲ ಮೂವರು ಒಂದೇ ಮೈತ್ರಿಕೂಟದ ಅಡಿಗೆ ಬಂದಿದ್ದಾರೆ. ಅವರೇ ಅಸ್ಸಾಂ ಕಾಂಗ್ರೆಸ್ನ ಅಧ್ಯಕ್ಷ ಗೌರವ್ ಗೊಗೊಯ್, ಅಸ್ಸಾಂ ಜಾತಿಯ ಪರಿಷತ್ನ ಮುಖ್ಯಸ್ಥ ಲುರಿಂಜ್ಯೋತಿ ಗೊಗೊಯ್ ಮತ್ತು ರೈಜೋರ್ ದಳದ ಸ್ಥಾಪಕ ಅಖಿಲ್ ಗೊಗೊಯ್.

ತರುಣ್ ಗೊಗೊಯ್ ಪುತ್ರ ಗೌರವ್ ಗೊಗೊಯ್ ಮೂರು ಅವಧಿಯಿಂದ ಸಂಸದರಾಗಿದ್ದಾರೆ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕರೂ ಆಗಿದ್ದಾರೆ. ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ರಾಜ್ಯದ ಪ್ರಮುಖ ಮಾಹಿತಿ ಹಕ್ಕು ಕಾರ್ಯಕರ್ತರಲ್ಲಿ ಒಬ್ಬರಾಗಿರುವ ಅಖಿಲ್ ಅವರು 2020 ರಲ್ಲಿ ರೈಜೋರ್ ದಳ ಸ್ಥಾಪಿಸಿದರು. 2021ರ ಚುನಾವಣೆಯಲ್ಲಿ ಶಿವಸಾಗರ್ ಕ್ಷೇತ್ರದಿಂದ ಆಯ್ಕೆಯಾದರು.

2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರವಾದ ನಂತರ ಅಸ್ಸಾಂನಲ್ಲಿ ಪ್ರಾದೇಶಿಕ ಭಾವನೆಗಳು ಉತ್ತುಂಗಕ್ಕೇರುತ್ತಿದ್ದಂತೆ ಲುರಿಂಜ್ಯೋತಿ ಗೊಗೊಯ್ ಅವರ ಜನಪ್ರಿಯತೆ ವೇಗವಾಗಿ ಹೆಚ್ಚಾಯಿತು. ಈ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಅಸ್ಸಾಂ ಜಾತಿಯ ಪರಿಷತ್ ಸ್ಥಾಪಿಸಿದ ಅವರು ಮರು ವರ್ಷ ಚುನಾವಣಾ ರಾಜಕಾರಣಕ್ಕೆ ಪದಾರ್ಪಣೆ ಮಾಡಿದರು.

ಈ ಮೂವರು ಗೊಗೊಯ್ಗಳ ಒಗ್ಗೂಡುವಿಕೆಯಿಂದಾಗಿ ಅಹೋಮ್ ಸಮುದಾಯವು ಗಣನೀಯ ಸಂಖ್ಯೆಯಲ್ಲಿರುವ 40–45 ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಭಾವ ಬೀರುವ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷವು ರೈಜೋರ್ ದಳಕ್ಕೆ 11 ಕ್ಷೇತ್ರಗಳನ್ನು ಮತ್ತು ಅಸ್ಸಾಂ ಜಾತಿಯ ಪರಿಷತ್ಗೆ 10 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.

ಮತ ಧ್ರುವೀಕರಣದತ್ತ ಚಿತ್ತ:

ಕಳೆದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು ಶೇ 43.96 ರಷ್ಟು ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಮೈತ್ರಿಕೂಟವು ಶೇ 42.33ರಷ್ಟು ಮತಗಳನ್ನು ಪಡೆದಿತ್ತು. ಮತಗಳ ಅಂತರ ಶೇ 1.5 ರಷ್ಟಿದ್ದರೂ, ಕ್ಷೇತ್ರಗಳ ಅಂತರ 25 ಆಗಿತ್ತು. ಬಿಜೆಪಿಯೊಂದೇ 60 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. ಅಸ್ಸಾಂ ಜಾತಿಯ ಪರಿಷತ್ 82 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶೇ 3.7 ರಷ್ಟು ಮತಗಳನ್ನು ಪಡೆದಿದ್ದರೆ, ರೈಜೋರ್ ದಳ 29 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ ಶೇ 1.5 ರಷ್ಟು ಮತಗಳನ್ನು ಗಳಿಸಿತ್ತು. ಕಾಂಗ್ರೆಸ್ ಸೋತ 14 ಕ್ಷೇತ್ರಗಳಲ್ಲಿ, ಈ ಎರಡೂ ಪಕ್ಷಗಳು ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳನ್ನು ಗಳಿಸಿದ್ದವು.

ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಲ್ಲಿ ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ಪ್ರಮುಖ ಪಕ್ಷವಾಗಿತ್ತು. ಈ ಸಲ ಈ ಪಕ್ಷವು ಮೈತ್ರಿಕೂಟದಲ್ಲಿಲ್ಲ. ಅಜ್ಮಲ್ ಅವರಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಮತಗಳ ಧ್ರುವೀಕರಣವನ್ನು ಪರಿಣಾಮಕಾರಿಯಾಗಿ ತಡೆಯಬಹುದು ಮತ್ತು ಅಸ್ಸಾಂನಲ್ಲಿ ಬುಡಕಟ್ಟು ಹಿಂದೂ ಮತಗಳನ್ನು ಆಕರ್ಷಿಸಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

ಹೀಗೊಂದು ಲೆಕ್ಕಾಚಾರ...

ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 34.2ರಷ್ಟಿದೆ.
ಶೇ 90ರಷ್ಟು ಮುಸ್ಲಿಮರು 14 ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಈ ಜಿಲ್ಲೆಗಳಲ್ಲಿ 70 ವಿಧಾನಸಭಾ ಕ್ಷೇತ್ರಗಳಿವೆ. ಈ ಜಿಲ್ಲೆಗಳಲ್ಲಿ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿಲ್ಲ. ಆದರೆ, ಉಳಿದ 13 ಜಿಲ್ಲೆಗಳಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದೆ.

2024ರ ಲೋಕಸಭಾ ಚುನಾವಣೆಯಲ್ಲಿ 13 ಜಿಲ್ಲೆಗಳ 56 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ಡಿಎ ಮೈತ್ರಿಕೂಟ 45ರಲ್ಲಿ ಮುನ್ನಡೆ ಸಾಧಿಸಿತ್ತು. ಮುಸ್ಲಿಂ ಬಾಹುಳ್ಯದ 70 ಕ್ಷೇತ್ರಗಳಲ್ಲಿ ಕಾಂಗ್ರೆಸ್ 30 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಉಳಿದ 56 ಕ್ಷೇತ್ರಗಳಲ್ಲಿ 10ರಲ್ಲಿ ಮಾತ್ರ ಮೇಲುಗೈ ಪಡೆದಿತ್ತು.

ತರುಣ್ ಗೊಗೊಯ್ ಅವರು ಮುಸ್ಲಿಂ ಹಾಗೂ ಹಿಂದೂ ಮತಗಳ ಸಮೀಕರಣದ ನೆರವಿನಿಂದ ಮೂರು ಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ, ಹಿಂದೂ ಮತದಾರರನ್ನು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಸೆಳೆದುಕೊಂಡು ದಶಕವೇ ಕಳೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.