ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ | ಸಾಮೂಹಿಕ ಅತ್ಯಾಚಾರ ಆರೋಪಿಯ ಶವ ಸಂಸ್ಕಾರಕ್ಕೆ ಗ್ರಾಮಸ್ಥರ ವಿರೋಧ

ಕೃತ್ಯದಿಂದ ಊರಿಗೇ ಅವಮಾನವಾಗಿದೆ ಎಂದ ಗ್ರಾಮಸ್ಥರು
Published : 24 ಆಗಸ್ಟ್ 2024, 10:15 IST
Last Updated : 24 ಆಗಸ್ಟ್ 2024, 10:15 IST
ಫಾಲೋ ಮಾಡಿ
Comments

ಗುವಾಹಟಿ: ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯ ಶವಸಂಸ್ಕಾರಕ್ಕೆ, ಆತನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪ್ರಮುಖ ಆರೋಪಿ, ನಗೋನ್ ಜಿಲ್ಲೆಯ ಧಿಂಗ್‌ ಎಂಬಲ್ಲಿ ಶನಿವಾರ (ಇಂದು) ನಸುಕಿನಲ್ಲಿ ಕೆರೆಗೆ ಹಾರಿದ್ದರು. ಇದೀಗ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಕುಟುಂಬವಿರುವ 'ಬೊರ್ಭೆಟಿ' ಗ್ರಾಮಸ್ಥರು, ಆರೋಪಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಲು ತೀರ್ಮಾನಿಸಿದ್ದಾರೆ.

'ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿತ್ತು. ಪ್ರಕರಣದ ಮರುಸೃಷ್ಟಿ ಸಲುವಾಗಿ, ಕೈಗೆ ಬೇಡಿ ಹಾಕಿದ್ದ ಸ್ಥಿತಿಯಲ್ಲೇ ಆರೋಪಿಯನ್ನು ಘಟನಾ ಸ್ಥಳಕ್ಕೆ ನಸುಕಿನ 3.30ರ ಹೊತ್ತಿಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿದ ಆರೋಪಿ, ಪೊಲೀಸರ ವಶದಿಂದ ತಪ್ಪಿಸಿಕೊಂಡು ಕೆರೆಗೆ ಹಾರಿದ್ದ' ಎಂದು ನಗೋನ್ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಸ್ವಪ್ನೀಲ್‌ ದೇಕಾ ಅವರು ತಿಳಿಸಿದ್ದಾರೆ.

ಕೂಡಲೇ ರಾಜ್ಯ ವಿಪತ್ತು ಪರಿಹಾರ ಪಡೆಗೆ (ಎಸ್‌ಡಿಆರ್‌ಎಫ್‌) ವಿಚಾರ ಮುಟ್ಟಿಸಿ, ಶೋಧ ಆರಂಭಿಸಲಾಯಿತು. ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಶವ ಸಿಕ್ಕಿದೆ. ದಾಳಿಯಿಂದ ಗಾಯಗೊಂಡಿರುವ ಪೊಲೀಸ್‌ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅತ್ಯಾಚಾರ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು, ಸೆರೆಗೆ ಬಲೆ ಬೀಸಲಾಗಿದೆ. ಹಲವು ಸ್ಥಳಗಳ ಮೇಲೆ ಶುಕ್ರವಾರ ರಾತ್ರಿಯೇ ದಾಳಿ ನಡೆಸಲಾಗಿದೆ.

ಬೈಕ್‌ನಲ್ಲಿ ಬಂದಿದ್ದ ಮೂವರು ಆರೋಪಿಗಳು, ಅದೇ ತಾನೆ 'ಮನೆಪಾಠ' ಮುಗಿಸಿ ಸೈಕಲ್‌ನಲ್ಲಿ ಮನೆಗೆ ಮರಳುತ್ತಿದ್ದ 14 ವರ್ಷದ ಬಾಲಕಿಯನ್ನು ಧಿಂಗ್‌ನಲ್ಲಿ ಗುರುವಾರ ಸಂಜೆ ಅಡ್ಡಗಟ್ಟಿದ್ದರು. ಅತ್ಯಾಚಾರವೆಸಗಿದ ನಂತರ ರಸ್ತೆ ಪಕ್ಕದಲ್ಲೇ ಇರುವ ಕರೆ ಹತ್ತಿರ ಬಿಸಾಡಿದ್ದರು. ಪ್ರಜ್ಞಾಹೀನವಾಗಿ ಬಿದಿದ್ದ ಹಾಗೂ ಗಾಯಗೊಂಡಿದ್ದ ಸಂತ್ರಸ್ತೆಯನ್ನು ಸ್ಥಳೀಯರು ರಕ್ಷಿಸಿದ್ದರು.

'ಗ್ರಾಮಸ್ಥರಿಂದ ಮೂರು ನಿರ್ಧಾರ'
ಆರೋಪಿ ಮೃತಪಟ್ಟ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ಸಭೆ ನಡೆಸಿರುವ ಗ್ರಾಮಸ್ಥರು, ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

'ಗ್ರಾಮದ ಸ್ಮಶಾನದಲ್ಲಿ ಶವಸಂಸ್ಕಾರ ನಡೆಸಲು ಅವಕಾಶ ನೀಡುವುದಿಲ್ಲ. ಆತನ ‘ಜನಾಝ’ಗೂ (ಮೃತದೇಹವನ್ನು ಹೂಳುವುದಕ್ಕೂ ಮೊದಲು ಮಾಡುವ ಪ್ರಾರ್ಥನೆ) ನಾವು ಹೋಗುವುದಿಲ್ಲ ಮತ್ತು ಆರೋಪಿಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಲು ನಿರ್ಧರಿಸಿದ್ದೇವೆ' ಎಂದು ಊರಿನ ಹಿರಿಯ ಮೊಹಮ್ಮದ್‌ ಶಹಜಹಾನ್‌ ಅಲಿ ಚೌಧರಿ ತಿಳಿಸಿದ್ದಾರೆ.

'ಗ್ರಾಮದ ಯುವಕರ ಕೃತ್ಯದಿಂದ ನಮಗೆಲ್ಲ ಅವಮಾನವಾಗಿದೆ' ಎಂದೂ ಹೇಳಿದ್ದಾರೆ.

ಕೃತ್ಯವನ್ನು ವಿರೋಧಿಸಿ ಗ್ರಾಮದ ಮಸೀದಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ಕಠಿಣ ಕ್ರಮ: ಸಿಎಂ
ಕೃತ್ಯವನ್ನು ಖಂಡಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಶುಕ್ರವಾರ ಭರವಸೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಸದ್ಯ ಬರಾಕ್‌ ಕಣಿವೆಯಲ್ಲಿನ ಮೂರು ಜಿಲ್ಲೆಗಳ ಪ್ರವಾಸದಲ್ಲಿರುವ ಶರ್ಮಾ, ಇಂತಹ ಪ್ರಕರಣಗಳನ್ನು ಅಸ್ಸಾಂ ಮತ್ತು ಬಂಗಾಳ ನಿರ್ವಹಿಸುವ ವಿಧಾನಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಎಂದಿದ್ದಾರೆ.

'ಬಂಗಾಳದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಾಗ, ತಪ್ಪಿತಸ್ಥರನ್ನು ರಕ್ಷಿಸಲಾಗುತ್ತದೆ ಮತ್ತು ಪೊಲೀಸರು ಅನುಮಾನಾಸ್ಪದವಾಗಿ ಕ್ರಮ ಕೈಗೊಳ್ಳುತ್ತಾರೆ' ಎಂದು ಆರೋಪಿಸಿರುವ ಅವರು, 'ಅಸ್ಸಾಂನಲ್ಲಿ ಬಾಲಕಿ ಮೇಲೆ ಹೇಯ ಕೃತ್ಯ ನಡೆದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದೆ' ಎಂದು ತಿಳಿಸಿದ್ದಾರೆ.

ತಕ್ಷಣವೇ ಸ್ಥಳಕ್ಕೆ ತೆರಳುವಂತೆ ಹಾಗೂ ತನಿಖೆ ಆರಂಭಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿರುವುದಾಗಿಯೂ ಹೇಳಿದ್ದಾರೆ.

ಸಂತ್ರಸ್ತ ಬಾಲಕಿಯು ಸದ್ಯ ನಗೋನ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT