ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ ಸಿಎಂ ವಜಾಗೊಳಿಸಿ: ರಾಷ್ಟ್ರಪತಿಗೆ ವಿಪಕ್ಷಗಳ ಮನವಿ

Published : 29 ಆಗಸ್ಟ್ 2024, 13:09 IST
Last Updated : 29 ಆಗಸ್ಟ್ 2024, 13:09 IST
ಫಾಲೋ ಮಾಡಿ
Comments

ಗುವಾಹಟಿ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಹಾಗೂ ಸಮುದಾಯಗಳ ನಡುವೆ ಒಡಕು ಮೂಡಿಸುತ್ತಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಸಂಯುಕ್ತ ವಿರೋಧ ಪಕ್ಷಗಳ ವೇದಿಕೆ, ಅಸ್ಸಾಂ (ಯುಒಎಫ್‌ಎ) ನಿಯೋಗ ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದೆ.

ಲೋಕಸಭೆಯ ಕಾಂಗ್ರೆಸ್ ಸಂಸದ ಪರ್ದ್ಯುತ್ ಬೊರ್ದೊಲೈ ಮತ್ತು ಒಕ್ಕೂಟದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಲುರಿಂಜ್ಯೋತಿ ಗೊಗೊಯ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಇಲ್ಲಿನ ರಾಜಭವನದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮುಖ್ಯಮಂತ್ರಿ ಅವರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ, ತರಕಾರಿ ಮಾರಾಟಗಾರರು, ರಿಕ್ಷಾ ಚಾಲಕರು, ಖಾಸಗಿ ವಾಹನ ಚಾಲಕರು ಮತ್ತು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುವಾಹಟಿಯಿಂದ ಹೊರಹಾಕಲು ಕೆಲವು ಯುವಕರನ್ನು ಅವರು ಪ್ರಚೋದಿಸಿದ್ದರು ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ನಾಗಾಂವ್ ಜಿಲ್ಲೆಯ ಬಟಾದ್ರವಾದಲ್ಲಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಬುಲ್ಡೋಜರ್‌ಗಳಿಂದ ನೆಲಸಮ ಮಾಡಲಾಗಿತ್ತು. ಇದಕ್ಕೆ ಗುವಾಹಟಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ಅಲ್ಲದೇ ಅವರಿಗೆ ಪರಿಹಾರ ನೀಡುವಂತೆ ಆದೇಶಿಸಿತ್ತು. ‘ಆರೋಪಿಯ ಮನೆ ಧ್ವಂಸ ಮಾಡುವ ಅವಕಾಶ ಯಾವ ಅಪರಾಧ ಕಾನೂನಿನಲ್ಲಿಯೂ ಇಲ್ಲ, ಹೀಗೆ ಮಾಡುವುದು ಗ್ಯಾಂಗ್‌ ವಾರ್‌ಗೆ ಸಮ‘ ಎಂದು ಹೈ ಕೋರ್ಟ್‌ ಹೇಳಿತ್ತು ಎಂಬುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿ ಪ್ರಚೋದನಕಾರಿ ಹೇಳಿಕೆಗಳ ಮೂಲಕ ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT