ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: ₹25 ಲಕ್ಷ ಮೌಲ್ಯದ ಕೆಮ್ಮಿನ ಸಿರಪ್ ಅಕ್ರಮ ಸಾಗಾಟ, ಮೂವರ ಬಂಧನ

Published 22 ಮೇ 2023, 4:15 IST
Last Updated 22 ಮೇ 2023, 4:15 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನ ಗೋಲ್ಪಾರಾ ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹25 ಲಕ್ಷ ಮೌಲ್ಯದ ಕೆಮ್ಮಿನ ಸಿರಪ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಖಚಿತ ಮಾಹಿತಿ ಆಧಾರದ ಮೇಲೆ ನಾವು ಪೈಕಾನ್ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 5,075 ಕೆಮ್ಮಿನ ಸಿರಪ್ ಬಾಟಲಿಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಕೆಮ್ಮಿನ ಸಿರಪ್ ಬಾಟಲಿಗಳ ಮಾರುಕಟ್ಟೆ ಮೌಲ್ಯ ಸುಮಾರು ₹25 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಗೋಲ್‌ಪಾರಾ ಜಿಲ್ಲೆಯ ಪೊಲೀಸ್ ಉಪ ಅಧೀಕ್ಷಕ ಅನುರಾಗ್ ಶರ್ಮಾ ಮಾಹಿತಿ ನೀಡಿದ್ದಾರೆ.

ಕೆಮ್ಮಿನ ಸಿರಪ್ ಬಾಟಲಿಗಳನ್ನು ತುಂಬಿದ್ದ ವಾಹನ ಮೇಘಾಲಯದ ತುರಾ ಕಡೆಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಮ್ಮಿನ ಸಿರಪ್ ಬಾಟಲಿಗಳು ಯಾವ ಕಂಪನಿಗೆ ಸೇರಿದ್ದು ಎಂಬ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಮತ್ತೊಂದು ಅಸುರಕ್ಷಿತ ಸಿರಪ್‌ ವಿದೇಶದಲ್ಲಿ ಪತ್ತೆ

ನವದೆಹಲಿ: ಭಾರತದಲ್ಲಿ ತಯಾರಾದ ಮತ್ತೊಂದು ಕಲಬೆರಕೆ ಕೆಮ್ಮಿನ ಸಿರಪ್‌ ವಿದೇಶಗಳಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇತ್ತೀಚೆಗೆ ಹೇಳಿತ್ತು.

ಇದು ಕಳೆದ ಏಳು ತಿಂಗಳಲ್ಲಿ ವರದಿಯಾದ ಮೂರನೇ ನಿದರ್ಶನವಾಗಿದೆ. ಮಾರ್ಷಲ್ ದ್ವೀಪ ಮತ್ತು ಮೈಕ್ರೋನೇಷಿಯಾದಲ್ಲಿ ಕೆಮ್ಮಿನ ಔಷಧಿಯಾಗಿ ಬಳಸುತ್ತಿರುವ ಗ್ವಾಫೆನಾಸಿನ್‌ (Guaifenesin) ಸಿರಪ್‌ನಲ್ಲಿ ಸ್ವೀಕಾರಾರ್ಹವಲ್ಲದ ಎರಡು ಮಾಲಿನ್ಯಕಾರಕಗಳು ಹೆಚ್ಚಿನ ಮಟ್ಟದಲ್ಲಿರುವುದು ಕಂಡುಬಂದಿದೆ. ಈ ಸಿರಪ್‌ ಮಾನವ ಬಳಕೆಗೆ ಸುರಕ್ಷಿತವಲ್ಲವೆಂದು ಡಬ್ಲ್ಯುಎಚ್‌ಒ ಎಚ್ಚರಿಸಿತ್ತು.

‘ಮಾರ್ಷಲ್ ದ್ವೀಪದಿಂದ ಈ ಸಿರಪ್‌ನ ಮಾದರಿಗಳನ್ನು ಆಸ್ಟ್ರೇಲಿಯಾದ ಚಿಕಿತ್ಸಕ ಔಷಧ ಸರಕುಗಳ ಆಡಳಿತದ (ಟಿಜಿಎ) ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳು ವಿಶ್ಲೇಷಿಸಿವೆ. ಉತ್ಪನ್ನವು ಸ್ವೀಕಾರಾರ್ಹವಲ್ಲದ ಪ್ರಮಾಣದ ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಅನ್ನು ಮಾಲಿನ್ಯಕಾರಕಗಳಾಗಿ ಹೊಂದಿರುವುದನ್ನು ಟಿಜಿಎ ವಿಶ್ಲೇಷಣೆಯಲ್ಲಿ ಪತ್ತೆಯಾಗಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿತ್ತು.

ಪಂಜಾಬ್‌ನ ಕ್ಯುಪಿ ಫಾರ್ಮಾ ಕೆಮ್‌ ಲಿಮಿಟೆಡ್‌ ಗ್ವಾಫೆನಾಸಿನ್‌ ಸಿರಪ್‌ ತಯಾರಿಸಿದ್ದು, ಹರಿಯಾಣದ ಟ್ರಿಲಿಯಮ್ ಫಾರ್ಮಾ ಮಾರಾಟ ಮಾಡಿದೆ. ತಯಾರಕರು ಅಥವಾ ಮಾರಾಟಗಾರರು ಈ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಡಬ್ಲ್ಯುಎಚ್‌ಒಗೆ ಖಾತರಿ ನೀಡಿಲ್ಲ. ಕಲುಷಿತವಾದ ಈ ಸಿರಪ್ ಸೇವಿಸಿದ ನಂತರ ಪೆಸಿಫಿಕ್ ರಾಷ್ಟ್ರಗಳಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಕಾಣಿಸಿದೆಯೇ ಎನ್ನುವ ಬಗ್ಗೆ ಡಬ್ಲ್ಯುಎಚ್‌ಒ ಹೆಚ್ಚಿನ ವಿವರಣೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT