ಮುಂಬೈ: ಇಬ್ಬರು ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿ ಬುಗಿಲೆದ್ದ ಆಕ್ರೋಶದಿಂದಾಗಿ, ಈ ನಿಲ್ದಾಣ ಮೂಲಕ ಸಂಚರಿಸುವ 12 ರೈಲುಗಳ ಮಾರ್ಗಗಳನ್ನು ಕೇಂದ್ರ ರೈಲ್ವೆ ವಿಭಾಗ ಬದಲಾವಣೆ ಮಾಡಿದೆ. ಪ್ರತಿಭಟನಾಕಾರರು ರೈಲು ತಡೆದಿದ್ದರಿಂದ, ರೈಲಿನಲ್ಲಿದ್ದ ಪ್ರಯಾಣಿಕರಿಗೆ ಬಸ್ಸುಗಳ ಸೌಕರ್ಯ ಒದಗಿಸಲಾಗಿತ್ತು.
ಮೂರು ಮತ್ತು ನಾಲ್ಕು ವರ್ಷ ವಯಸ್ಸಿನ ಶಿಶುವಿಹಾರದ ಇಬ್ಬರು ವಿದ್ಯಾರ್ಥಿನಿಯರನ್ನು ನಿಂದಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬದ್ಲಾಪುರದ ಶಾಲಾ ಸಿಬ್ಬಂದಿಯೊಬ್ಬರನ್ನು ಶನಿವಾರ ಪೊಲೀಸರು ಬಂಧಿಸಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪೋಷಕರು ಮತ್ತು ಸ್ಥಳೀಯರು ಬದ್ಲಾಪುರ ರೈಲು ನಿಲ್ದಾಣದಲ್ಲಿ ರೈಲುಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಪೊಲೀಸರಿಂದ ಪ್ರತಿಭಟನಾಕಾರರನ್ನು ಮನವೊಲಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ 4ರಿಂದ 5 ಗಂಟೆಗಳವರೆಗೆ ರೈಲು ಸಂಚಾರ ಸ್ಥಗಿತಗೊಂಡಿತ್ತು.
ಈ ಘಟನೆಯಿಂದಾಗಿ 30 ಉಪನಗರ ರೈಲುಗಳು ಭಾಗಶಃ ರದ್ದಾಗಿವೆ. ಹೀಗಾಗಿ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ಸುಗಳ ಕಾರ್ಯಾಚರಣೆ ನಡೆಸುವಂತೆ ರೈಲ್ವೆ ಇಲಾಖೆಯು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕೇಳಿದೆ.
‘ವಾರದ ಹಿಂದೆ ಘಟನೆ ನಡೆದಿದೆ. ಇದರ ವಿರುದ್ಧ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಹಲವರು ಮಹಿಳೆಯರು ಹಳಿಗೆ ಇಳಿದು ರೈಲು ತಡೆದರು. ರಸ್ತೆಯನ್ನೂ ತಡೆದು ಪ್ರತಿಭಟಿಸಿದರು. ಹೀಗಾಗಿ ಬೆಳಿಗ್ಗೆ 10.10ರಿಂದ ಅಂಬೆರ್ನಾಥ ಹಾಗೂ ಕಾರ್ಜಾತ್ ನಡುವೆ ರೈಲು ಸಂಚಾರ ಸ್ಥಗಿತಗೊಂಡಿತು. ಶಾಲಾ ಕಟ್ಟಡವನ್ನು ಧ್ವಂಸಗೊಳಿಸಿದರು. ರೈಲು ನಿಲ್ದಾಣದ ಮೇಲೆ ಕಲ್ಲು ತೂರಾಟವೂ ನಡೆದಿದೆ’ ಎಂದು ಪೊಲೀಸರು ಹೇಳಿದ್ದಾರೆ.
‘ಸೊಲ್ಲಾಪುರ–ಸಿಎಸ್‌ಎಂಟಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದಿವಾ–ಪನ್ವೇಲ್–ಕಾರ್ಜತ್ ನಿಲ್ದಾಣಗಳ ಮಾರ್ಗವಾಗಿ ಸಂಚರಿಸಲಿದೆ. ಹೀಗೆಯೇ 12 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರೊಂದಿಗೆ 30 ಉಪನಗರ ರೈಲುಗಳು ರದ್ದಾಗಿವೆ’ ಎಂದು ಕೇಂದ್ರ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವಪ್ನಿಲ್ ನೀಲಾ ತಿಳಿಸಿದ್ದಾರೆ.
‘ಕಲ್ಯಾಣ್ ಮತ್ತು ಕಾರ್ಜಾತ್ ನಡುವೆ ಹೆಚ್ಚುವರಿ 100 ಬಸ್ಸುಗಳ ಸಂಚಾರಕ್ಕೆ ಸಾರಿಗೆ ಸಂಸ್ಥೆಯನ್ನು ಕೋರಲಾಗಿತ್ತು. ಅಲ್ಲಿಂದ 55 ಬಸ್ಸುಗಳು ದೊರೆತಿವೆ’ ಎಂದು ತಿಳಿಸಿದ್ದಾರೆ.
ರೈಲ್ವೆ ಮೂಲಗಳ ಪ್ರಕಾರ ಮುಂಬೈನಿಂದ ಹೊರಟ ಕೊಲ್ಹಾಪುರ- ಕೊಯ್ನಾ ಎಕ್ಸ್‌ಪ್ರೆಸ್ ರೈಲು ಕಳೆದ ನಾಲ್ಕು ಗಂಟೆಗಳಿಂದ ಬದ್ಲಾಪುರ ನಿಲ್ದಾಣದಲ್ಲಿ ನಿಂತಿತ್ತು. ಈ ರೈಲು ಮಧ್ಯಾಹ್ನ 1ಕ್ಕೆ ಹಿಮ್ಮುಖವಾಗಿ ಚಲಿಸಿ, ಕಲ್ಯಾಣ್–ದಿವಾ–ಪನ್ವೆಲ್–ಕಾರ್ಜತ್ ಮಾರ್ಗದ ಮೂಲಕ ಕಾರ್ಯಾಚರಣೆ ನಡೆಸಿದೆ.
ಘಟನಾ ಸ್ಥಳದಲ್ಲಿ ರೈಲ್ವೆ ಸುರಕ್ಷತಾ ದಳದ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಇಲಾಖೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.