ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶದಂತಹ ಪರಿಸ್ಥಿತಿ ಭಾರತಕ್ಕೂ ಪಾಠವಿದ್ದಂತೆ: ಮೆಹಬೂಬಾ ಮುಫ್ತಿ

Published : 7 ಆಗಸ್ಟ್ 2024, 12:34 IST
Last Updated : 7 ಆಗಸ್ಟ್ 2024, 12:34 IST
ಫಾಲೋ ಮಾಡಿ
Comments

ಶ್ರೀನಗರ: ‘ಸರ್ವಾಧಿಕಾರ ಧೋರಣೆ ಹೆಚ್ಚು ಕಾಲ ಉಳಿಯುವುದಿಲ್ಲ. ಬಾಂಗ್ಲಾದೇಶದಲ್ಲಿ ಉಂಟಾದ ಅರಾಜಕತೆ ಭಾರತಕ್ಕೂ ಪಾಠವಿದ್ದಂತೆ’ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿರುದ್ಯೋಗ ಸಮಸ್ಯೆ, ಹಣದುಬ್ಬರ, ಉತ್ತಮ ಶಿಕ್ಷಣ ಪಡೆದ ಮೇಲೂ ಯುವಕರು ಉದ್ಯೋಗ ಅವಕಾಶ ವಂಚಿತರಾಗುವುದು ಅವರಲ್ಲಿ ಅಸಹಾಯಕತೆಗೆ ಕಾರಣವಾಗಬಹುದು. ಇದರಿಂದ ದೇಶದಲ್ಲಿಯೂ ಬಾಂಗ್ಲಾದೇಶದಂತಹ ಪರಿಸ್ಥಿತಿ ಉದ್ಭವಿಸಬಹುದು. ಸರ್ವಾಧಿಕಾರ ಧೋರಣೆ ಹೆಚ್ಚು ಕಾಲ ಉಳಿಯುವುದಿಲ್ಲ. ಇದು ಭಾರತಕ್ಕೂ ಪಾಠವಾಗಿದೆ’ ಎಂದು ಹೇಳಿದ್ದಾರೆ.

‘ಜನ ವಿರೋಧಿ ನೀತಿಗಳು ಹಾಗೂ ಕಾನೂನುಗಳಿಗೆ ಬೇಸತ್ತು, ಜನರು ತಮ್ಮ ತಾಳ್ಮೆ ಕಳೆದುಕೊಂಡು ತಿರುಗಿ ಬಿದ್ದರೆ ಬಾಂಗ್ಲಾದೇಶ ಪ್ರಧಾನಿ ಶೇಕ್‌ ಹಸೀನಾ ಪಲಾಯನ ಮಾಡಿದ ರೀತಿಯೇ ಮಾಡಬೇಕಾಗುತ್ತದೆ. ಹೀಗಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುವತ್ತ ಸರ್ಕಾರ ಗಮನಹರಿಸಬೇಕು. ಅಂತಹ ಪರಿಸ್ಥಿತಿಗಳು ದೇಶದಲ್ಲಿ ಉದ್ಭವಿಸಬಾರದು’ ಎಂದೂ ತಿಳಿಸಿದ್ದಾರೆ.

ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸುಮಾರು 440 ಮಂದಿ ಮೃತಪಟ್ಟಿದ್ದಾರೆ. ಪ್ರತಿಭಟನಾಕಾರರು ಢಾಕಾದಲ್ಲಿರುವ ಪ್ರಧಾನಿ ತಂಗುವ ಅರಮನೆಗೆ ನುಗ್ಗಿದ್ದರು. ದೇಶದಲ್ಲಿ ಉಂಟಾದ ಅರಾಜಕತೆಗೆ ನಲುಗಿದ ಶೇಕ್‌ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶದಿಂದ ಪಲಾಯನ ಮಾಡಿದ್ದರು.

ಬಾಂಗ್ಲಾ ಸ್ವಾತಂತ್ರ್ಯ ಸಮರದಲ್ಲಿ ಭಾಗಿಯಾಗಿದ್ದವರ ಸಂಬಂಧಿಕರಿಗೆ ಸರ್ಕಾರದ ಹುದ್ದೆಗಳಲ್ಲಿ ಶೇ 30ರಷ್ಟು ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮೀಸಲು ವ್ಯವಸ್ಥೆಯನ್ನು ಕೊನೆಗೊಳಿಸಬೇಕು ಎಂಬುದು ಪ್ರತಿಭಟನಾಕಾರರ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT