ಕೋಲ್ಕತ್ತ: ಪಶ್ಚಿಮ ಬಂಗಾಳದ ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಮುಷ್ಕರ ನಡೆಸುತ್ತಿರುವ ವೈದ್ಯರು ಸರ್ಕಾರದೊಂದಿಗೆ 2ನೇ ಸುತ್ತಿನ ಮಾತುಕತೆ ಬುಧವಾರ ಸಂಜೆ ನಡೆಯಲಿದೆ.
ರಾಜ್ಯ ಸಚಿವಾಲಯದಲ್ಲಿ ಬುಧವಾರ ಸಂಜೆ 6.30ಕ್ಕೆ ಸಭೆ ಆರಂಭವಾಗಲಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವುದರಿಂದ ಮುಷ್ಕರ ಕೈಬಿಟ್ಟು, ಕೆಲಸಕ್ಕೆ ಹಾಜರಾಗುವಂತೆ ರಾಜ್ಯ ಸರ್ಕಾರ ಮಾಡಿಕೊಂಡಿರುವ ಮನವಿಯನ್ನು ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಪುನರುಚ್ಚರಿಸಿದ್ದಾರೆ.
ಇದಕ್ಕೂ ಮೊದಲು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಕಿರಿಯ ವೈದ್ಯರು, ಕೆಲವೊಂದು ವಿಷಯಗಳ ಕುರಿತು ಚರ್ಚೆಯ ಅಗತ್ಯವನ್ನು ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರದ ಆಸ್ಪತ್ರೆಗಳಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಕೆಲವೊಂದು ವಿಷಯಗಳು ಈವರೆಗೂ ಪರಿಹಾರವಾಗಿಲ್ಲ ಎಂದಿದ್ದರು. ಇದಕ್ಕೂ ಮೊದಲು ಬುಧವಾರ ಬೆಳಿಗ್ಗೆ ವೈದ್ಯರು ಸಭೆ ನಡೆಸಿದರು. ಈ ವಿಷಯ ಸಂಜೆ ನಡೆಯುವ ಸಭೆಯಲ್ಲಿ ಚರ್ಚೆಗೊಳ್ಳುವ ಸಾಧ್ಯತೆ ಇದೆ.