ಲಖನೌ/ಕಾನ್ಪುರ: 2020ರಲ್ಲಿ ಡಿಎಸ್‌ಪಿ ಸೇರಿದಂತೆ 8 ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು 23 ಅಪರಾಧಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬಿಕ್ರು ಎಂಬ ಗ್ರಾಮದಲ್ಲಿ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಗ್ಯಾಂಗ್ ಹತ್ಯೆ ನಡೆಸಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಇತರೆ 7 ಆರೋಪಿಗಳನ್ನು ಖುಲಾಸೆಗೊಳಿಸಿ ಕಾನ್ಪುರ ದೆಹಾತ್ ಜಿಲ್ಲೆಯ ವಿಶೇಷ ನ್ಯಾಯಾಲಯ ಆದೇಶ ನೀಡಿದೆ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಕ್ರು ಪ್ರಕರಣ ಸಂಬಂಧ ಇಂದು ತನ್ನ ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಾಲಯ, 30 ಆರೋಪಿಗಳ ಪೈಕಿ 23 ಮಂದಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಗ್ಯಾಂಗ್‌ಸ್ಟರ್ ವಿಕಾಸ್ ದುಬೆಯ ಸಹವರ್ತಿ ಶ್ಯಾಮು ವಾಜಪೇಯಿ (35) ಮತ್ತು ಆತನಿಗೆ ಹಣಕಾಸು ನೆರವು ನೀಡಿದ ಜಯಕಾಂತ್ ವಾಜಪೇಯಿ ಅಲಿಯಾಸ್ ಜಯ್(37) ಸೇರಿದಂತೆ 23 ಮಂದಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ದುರ್ಗೇಶ್ ಶಿಕ್ಷೆ ವಿಧಿಸಿದ್ದಾರೆ.
ವಿಕಾಸ್ ದುಬೆ ಅವರ ಆಪ್ತರಾದ ದಯಾಶಂಕರ್ ಅಗ್ನಿಹೋತ್ರಿ, ಶ್ಯಾಮು ವಾಜಪೇಯಿ, ಜಹಾನ್ ಯಾದವ್, ಶಶಿಕಾಂತ್ ಪಾಂಡೆ, ಶಿವಂ ದುಬೆ, ಗೋಪಾಲ್ ಸೈನಿ, ಹೀರು ದುಬೆ, ಶಿವ ತಿವಾರಿ, ವಿಷ್ಣು ಪಾಲ್ ಮತ್ತು ರಾಮ್ ಸಿಂಗ್ ಸೇರಿದಂತೆ 41 ಜನರನ್ನು ವಿಶೇಷ ಕಾರ್ಯಪಡೆ ಮತ್ತು ಕಾನ್ಪುರ ಪೊಲೀಸರು ಬಂಧಿಸಿದ್ದರು ಎಂದು ಹೆಚ್ಚುವರಿ ಡಿಸಿಪಿ ಲಖನ್ ಸಿಂಗ್ ಯಾದವ್ ಹೇಳಿದ್ದಾರೆ.
ಅವರಲ್ಲಿ 30 ಮಂದಿಯ ವಿರುದ್ಧ ಗ್ಯಾಂಗ್‌ಸ್ಟರ್ ಕಾಯಿದೆಯನ್ನು ಪ್ರಯೋಗಿಸಲಾಗಿದ್ದು, ಕೆಲವು ಪೊಲೀಸರು ಮತ್ತು ಮಹಿಳೆಯರು ಸೇರಿದಂತೆ ಉಳಿದ 11 ಮಂದಿಯ ವಿರುದ್ಧ ಈ ಕಾನೂನನ್ನು ಹೇರಲಾಗಿರಲಿಲ್ಲ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.