ಶ್ರೀನಗರ: ‘ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪಾಲುದಾರ ಆರ್‌ಎಸ್‌ಎಸ್ ದೇಶದಾದ್ಯಂತ ದ್ವೇಷ ಮತ್ತು ಹಿಂಸೆಯನ್ನು ಪೋಷಿಸುತ್ತಿವೆ‘ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಟೀಕಿಸಿದರು.
ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದ ಪೂಂಚ್ ಜಿಲ್ಲೆಯ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಎಲ್ಲೆಲ್ಲಿ ತೆರಳುತ್ತಾರೆಯೋ ಆ ಸ್ಥಳದಲ್ಲಿ ಅವರು ಜಾತಿ, ಧರ್ಮ, ರಾಜ್ಯ ಮತ್ತು ಭಾಷೆಯನ್ನು ವಿಭಜಿಸುತ್ತಾರೆ ಮತ್ತು ಸಂಘರ್ಷವನ್ನು ಪ್ರಚೋದಿಸುತ್ತಾರೆ‘ ಎಂದು ದೂರಿದರು.
‘ದೇಶದಲ್ಲಿ ಹಿಂದೆ ಕೇಂದ್ರಾಡಳಿತ ಪ್ರದೇಶವನ್ನು ರಾಜ್ಯವಾಗಿ ಮೇಲ್ದರ್ಜೆಗೇರಿಸಿದ ಮತ್ತು ರಾಜ್ಯವನ್ನು ವಿಭಜಿಸಿ ಹೊಸ ರಾಜ್ಯವನ್ನು ರಚಿಸಿದ ನಿದರ್ಶನಗಳಿದ್ದವು. ಆದರೆ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಗಿದೆ. ಈ ಮೂಲಕ ಇಲ್ಲಿನ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಹೀಗಾಗಿ ನಮ್ಮ ಮೊದಲ ಬೇಡಿಕೆ, ಜಮ್ಮು ಮತ್ತು ಕಾಶ್ಮೀರಕ್ಕೆ ಪುನಃ ರಾಜ್ಯ ಸ್ಥಾನಮಾನ ತರುವುದಾಗಿದೆ‘ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.
‘ವಿಧಾನಸಭಾ ಚುನಾವಣೆ ಮುಗಿದ ಬಳಿಕ ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು. ಒಂದು ವೇಳೆ ಈ ನಿಟ್ಟಿನಲ್ಲಿ ಕೇಂದ್ರ ವಿಫಲವಾದರೆ, ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ನಾವು ಶ್ರಮಿಸುತ್ತೇವೆ‘ ಎಂದು ಅವರು ಭರವಸೆ ನೀಡಿದರು.
ಕಾಂಗ್ರೆಸ್ ‘ದಲಿತ ವಿರೋಧಿ’ ಪಕ್ಷ: ಅಮಿತ್ ಶಾ
ಚಂಡೀಗಡ : ಕಾಂಗ್ರೆಸ್ ಪಕ್ಷವನ್ನು ದಲಿತ ವಿರೋಧಿ ಪಕ್ಷ ಎಂದು ಜರಿದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಕಾಂಗ್ರೆಸ್ ಪಕ್ಷವು ದಲಿತ ನಾಯಕರಾದ ಕುಮಾರಿ ಸೆಲ್ಜಾ ಮತ್ತು ಅಶೋಕ್ ತನ್ವರ್ ಅವರನ್ನು ಅವಮಾನಿಸಿದೆ’ ಎಂದು ದೂರಿದರು.
ಹರಿಯಾಣದ ಟೊಹಾನ್‌ನಲ್ಲಿ ಸೋಮವಾರ ನಡೆದ ಚುನಾವಣಾ ರ್‍ಯಾಲಿಯಲ್ಲಿ ಅವರು ಮಾತನಾಡಿದರು. ಮೀಸಲಾತಿ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ಟೀಕಿಸಿದ ಅವರು ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಮೀಸಲಾತಿಯನ್ನು ರಕ್ಷಿಸಲು ಸಾಧ್ಯ‘ ಎಂದು ಪ್ರತಿಪಾದಿಸಿದರು.
ಚುನಾವಣಾ ಪ್ರಚಾರಗಳಲ್ಲಿ ಭಾಗಿಯಾಗದಂತೆ ಕಾಂಗ್ರೆಸ್ ಪಕ್ಷವು ದಲಿತ ನಾಯಕರಾದ ಅಶೋಕ್ ತನ್ವರ್ ಮತ್ತು ಕುಮಾರಿ ಸೆಲ್ಜಾ ಅವರಿಗೆ ಹೇಳುವ ಮೂಲಕ ಅವರನ್ನು ಅವಮಾನಿಸಿದೆ ಎಂದು ಅಮಿತ್ ಶಾ ಆರೋಪಿಸಿದರು.
‘ಪ್ರಚಾರದಲ್ಲಿ ಸೆಲ್ಜಾ ಭಾಗಿಯಾಗಲಿದ್ದಾರೆ‘
ಚಂಡೀಗಢ: ಕಾಂಗ್ರೆಸ್ ಅನ್ನು ದಲಿತ ವಿರೋಧಿ ಪಕ್ಷ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ಸಿರ್ಸಾದ ಸಂಸದೆ ಕುಮಾರಿ ಸೆಲ್ಜಾ ಅವರು ಇದೇ 26ರಂದು ನರವಾನಾದಲ್ಲಿನ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಿಸಿದೆ.
ಈ ಕುರಿತು ಕಾಂಗ್ರೆಸ್ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ‘ಎಕ್ಸ್’ನಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.