ವಯನಾಡ್ (ಕೇರಳ): ಕೇಂದ್ರದ ಆಡಳಿತಾರೂಢ ಬಿಜೆಪಿಯು ಬುಡಕಟ್ಟು ಸಮುದಾಯಗಳನ್ನು ಅರಣ್ಯಕ್ಕೆ ಸೀಮಿತಗೊಳಿಸಲು ಮತ್ತು ಅವರನ್ನು ಆದಿವಾಸಿಗಳು ಎನ್ನುವ ಬದಲು ‘ವನವಾಸಿ’ಗಳೆಂದು ಕರೆಯುವ ಮೂಲಕ ಭೂಮಿಯ ಮೂಲ ಮಾಲೀಕರ ಸ್ಥಾನ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ.
ವಯನಾಡು ಜಿಲ್ಲೆಯ ಮಾನಂತವಾಡಿ ಪ್ರದೇಶದ ನಲ್ಲೂರ್ನಾಡ್‌ನಲ್ಲಿರುವ ಡಾ. ಅಂಬೇಡ್ಕರ್ ಜಿಲ್ಲಾ ಸ್ಮಾರಕ ಕ್ಯಾನ್ಸರ್ ಕೇಂದ್ರದಲ್ಲಿ ಎಚ್‌ಟಿ ಸಂಪರ್ಕ ಉದ್ಘಾಟಿಸಿ ಅವರು ಮಾತನಾಡಿದರು.
‘ಆದಿವಾಸಿಗಳನ್ನು ವನವಾಸಿಗಳು ಎಂದು ಕರೆಯುವುದರ ಹಿಂದೆ ‘ವಿಕೃತ ತರ್ಕ’ ಇದೆ. ‘ನೀವು (ಆದಿವಾಸಿಗಳು) ಭೂಮಿಯ ಮೂಲ ಮಾಲೀಕರು ಎಂಬುದನ್ನು ಅಲ್ಲಗಳೆಯಲು ಮತ್ತು ನಿಮ್ಮನ್ನು ಕಾಡಿಗೆ ಸೀಮಿತಗೊಳಿಸುವುದು ಈ ತರ್ಕದ ಉದ್ದೇಶವಾಗಿದೆ. ನೀವು ಕಾಡಿನಲ್ಲಿದ್ದೀರಿ, ನೀವು ಕಾಡು ತೊರೆಯಬಾರದೆಂಬ ಕಲ್ಪನೆಯೂ ಅವರದು’ ಎಂದು ರಾಹುಲ್ ಆರೋಪಿದರು.
‘ವನವಾಸಿ ಪದವು ಬುಡಕಟ್ಟು ಸಮುದಾಯಗಳ ಇತಿಹಾಸ ಮತ್ತು ಸಂಪ್ರದಾಯಗಳನ್ನು ವಿರೂಪಗೊಳಿಸುತ್ತದೆ. ಅಲ್ಲದೆ, ದೇಶದೊಂದಿಗಿನ ಅವರ ಸಂಬಂಧದ ಮೇಲಿನ ದಾಳಿಯೂ ಆಗಿದೆ. ನಮಗೆ (ಕಾಂಗ್ರೆಸ್) ನೀವು ಆದಿವಾಸಿಗಳು, ಭೂಮಿಯ ಮೂಲ ಮಾಲೀಕರು. ಈ ಸಿದ್ಧಾಂತವು ಆ ಪಕ್ಷಕ್ಕೆ (ಬಿಜೆಪಿ) ರುಚಿಸುವುದಿಲ್ಲ’ ಎಂದು ಹೇಳಿದರು.
ಕೋಯಿಕ್ಕೋಡ್ ವರದಿ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿರುವುದು ಆಘಾತ ಉಂಟುಮಾಡಿದೆ. ಇದು ತಕ್ಷಣ ನಿಲ್ಲಬೇಕಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.
‘ದ್ವೇಷ ಮತ್ತು ವಿಭಜನೆಯ ರಾಜಕೀಯದಿಂದಾಗಿ ಈ ಗಲಭೆ ನಡೆದಿದೆ’ ಎಂದಿರುವ ಅವರು, ‘ಎಲ್ಲರೂ ಒಂದೇ ಕುಟುಂಬದಂತೆ ಜೊತೆಯಾಗಿ ನಿಲ್ಲುವ ಅಗತ್ಯವಿದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.