ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಯುವತಿಗೆ 20ಕ್ಕೂ ಅಧಿಕ ಬಾರಿ ಇರಿದು, ಕಲ್ಲಿನಿಂದ ಜಜ್ಜಿ ಕೊಂದ ಪ್ರಿಯಕರ

Published 29 ಮೇ 2023, 9:33 IST
Last Updated 29 ಮೇ 2023, 9:33 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯ ಜನನಿಬಿಡ ಶಹಬಾದ್‌ ಡೈರಿ ಪ್ರದೇಶದಲ್ಲಿ ಭಾನುವಾರ ರಾತ್ರಿ 16 ವರ್ಷದ ಬಾಲಕಿಗೆ ಸುಮಾರು 20 ಬಾರಿ ಚಾಕುವಿನಿಂದ ಇರಿಯಲಾಗಿದ್ದು, ಬಳಿಕ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಜನದಟ್ಟಣೆ ನಡುವೆಯೇ ಕೃತ್ಯ ನಡೆದಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹಂಚಿಕೆಯಾಗಿದೆ. 20 ವರ್ಷದ ಸಾಹಿಲ್‌ ಆರೋಪಿ. ಈತನನ್ನು ಉತ್ತರ ಪ್ರದೇಶದ ಬುಲಂದ್‌ ಶಹರ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯಕ್ಕೆ ಕಾರಣ ಗೊತ್ತಾಗಿಲ್ಲ. ಆರೋಪಿ ಫ್ರಿಡ್ಜ್ ಮತ್ತು ಹವಾನಿಯಂತ್ರಕ ಪರಿಕರಗಳ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದ. ಬಾಲಕಿ ಜೆ.ಜೆ.ಕಾಲೊನಿಯ ನಿವಾಸಿ. ಆಕೆಯ ಶವ ರಸ್ತೆಯಲ್ಲಿಯೇ ಬಹಳ ಹೊತ್ತು ಅನಾಥವಾಗಿ ಬಿದ್ದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯು ಚಾಕುವಿನಿಂದ ಬಾಲಕಿಯನ್ನು ಇರಿಯುತ್ತಿದ್ದುದನ್ನು ಜನರು ನಿಂತು ನೋಡುತ್ತಿದ್ದು, ಯಾರೊಬ್ಬರು ಅದನ್ನು ತಡೆಯುವ ಯತ್ನ ಮಾಡಿಲ್ಲ. ಕೃತ್ಯದ ಹಿಂದೆಯೇ ಸಾಹಿಲ್‌ ಸ್ಥಳದಿಂದ ಪರಾರಿಯಾಗುವುದು ವಿಡಿಯೊದಲ್ಲಿ ದಾಖಲಾಗಿದೆ.  

‘ಇಬ್ಬರು ಪರಿಚಿತರಾಗಿದ್ದು, ಇತ್ತೀಚೆಗೆ ಜಗಳ ಆಡಿಕೊಂಡಿದ್ದರು. ಜನ್ಮದಿನದ ಕಾರ್ಯಕ್ರಮವೊಂದಕ್ಕೆ ಬಾಲಕಿ ತೆರಳುವಾಗ ಅಡ್ಡಗಟ್ಟಿದ ಆರೋಪಿ ಮನಸೋಇಚ್ಛೆ ಇರಿದಿದ್ದು, ಬಳಿಕ ಕಲ್ಲು ಎತ್ತಿ ಹಾಕಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಇದು, ತುಂಬ ನೋವು ಉಂಟುಮಾಡುವ ಕೃತ್ಯ. ಇನ್ನೂ ಶ್ರದ್ಧಾ ವಾಲ್ಕರ್‌ಗೆ ನ್ಯಾಯ ಸಿಕ್ಕಿಲ್ಲ. ಇನ್ನು ಎಷ್ಟು ಜನ ಶ್ರದ್ಧಾಗಳು ಹೀಗೆ ಕ್ರೂರವಾಗಿ ಬಲಿಪಶುಗಳಾಗಬೇಕೊ ತಿಳಿಯುತ್ತಿಲ್ಲ’ ಎಂದು ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಅವರು ಪ್ರತಿಕ್ರಿಯಿಸಿದ್ದಾರೆ.

‘ರಾಜಧಾನಿಯಲ್ಲಿ ಜನರ ರಕ್ಷಣೆ ಮಾಡುವ ಹೊಣೆಯನ್ನು ಸಂವಿಧಾನ ಲೆಫ್ಟಿನಂಟ್‌ ಗವರ್ನರ್ ಅವರಿಗೆ ನೀಡಿದೆ. ಅವರು ಕೇಜ್ರಿವಾಲ್ ಅವರ ಕೆಲಸಗಳಿಗೆ ತಡೆಯೊಡ್ಡುತ್ತಾ ಕಾಲಹರಣ ಮಾಡುತ್ತಿದ್ದಾರೆ’ ಎಂದು ಎಎಪಿ ಹಿರಿಯ ನಾಯಕಿ ಅತಿಷಿ ಟೀಕಿಸಿದ್ದಾರೆ. 

ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆಯ ಉಸ್ತುವಾರಿಯು ಲೆಫ್ಟಿನೆಂಟ್‌ ಗವರ್ನರ್ ಅವರ ಸುಪರ್ದಿಯಲ್ಲಿದೆ. ಅವರು ಪರಿಸ್ಥಿತಿ ಸುಧಾರಿಸಲು ‘ಏನಾದರೂ ಮಾಡಬೇಕು’.
ಅರವಿಂದ್ ಕೇಜ್ರಿವಾಲ್, ಮುಖ್ಯಮಂತ್ರಿ
ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ, ಪೊಲೀಸರ  ಕುರಿತು ಭೀತಿಯೇ ಇಲ್ಲವಾಗಿದೆ. ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳದಿದ್ದರೆ ಕ್ರೂರತೆಗೆ ಮಿತಿಯೇ ಇಲ್ಲವಾದಂತಾಗಲಿದೆ.
ಸ್ವಾತಿ ಮಲಿವಾಲ್‌, ಅಧ್ಯಕ್ಷೆ, ದೆಹಲಿ ಮಹಿಳಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT