ಹೈದರಾಬಾದ್: ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಪಕ್ಷದ 10 ಶಾಸಕರಿಗೆ ಸೀರೆ ಹಾಗೂ ಬಳೆಗಳನ್ನು ಉಡುಗೊರೆಯಾಗಿ ನೀಡುವುದಾಗಿ ಬಿಆರ್‌ಎಸ್ ಪಕ್ಷದ ಶಾಸಕ ಪಿ.ಕೌಶಿಕ್ ರೆಡ್ಡಿ ನೀಡಿರುವ ಹೇಳಿಕೆಗೆ ಆಡಳಿತಾರೂಢ ಪಕ್ಷದ ಶಾಸಕಿಯರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ, ತೆಲಂಗಾಣ ರಾಜ್ಯ ಮಹಿಳಾ ಸಹಕಾರ ಅಭಿವೃದ್ಧಿ ನಿಗಮದ ಅಧ್ಯಕ್ಷೆಯೂ ಆದ ಕಾಂಗ್ರೆಸ್ ನಾಯಕಿ ಬಿ.ಶೋಭಾ ರಾಣಿ, ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೇ, ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಕೌಶಿಕ್ ಅವರು ಅವಹೇಳನಕಾರಿ ಹೇಳಿಕೆಗಳ ಮೂಲಕ ಮಹಿಳೆಯರನ್ನು ಅವಮಾನಿಸಿದ್ದಾರೆ’ ಎಂದ ಅವರು, ಶೂ ಪ್ರದರ್ಶಿಸುವ ಮೂಲಕ ಅವರಿಗೆ ಎಚ್ಚರಿಕೆ ನೀಡಿದರು.
‘ಬಿಆರ್‌ಎಸ್ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹಾಗೂ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರೇ ರಾಜ್ಯದಲ್ಲಿ ಪಕ್ಷಾಂತರ ಆರಂಭಿಸಿದವರು. ಹೀಗಾಗಿ ಈ ಇಬ್ಬರಿಗೆ ಕೌಶಿಕ್ ಮೊದಲು ಸೀರೆ ಹಾಗೂ ಬಳೆಗಳನ್ನು ಕಳುಹಿಸಲಿ’ ಎಂದು ಸುದ್ದಿಗೋಷ್ಠಿಯಲ್ಲಿದ್ದ ಕಾಂಗ್ರೆಸ್ ನಾಯಕಿಯರು ಹೇಳಿದರು.
ಈ ಹೇಳಿಕೆಗಾಗಿ ಕೌಶಿಕ್ ರೆಡ್ಡಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಮಹಿಳಾ ಆಯೋಗವನ್ನು ಅವರು ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದ ಕೌಶಿಕ್ ರೆಡ್ಡಿ, ‘ಕಾಂಗ್ರೆಸ್ ಪಕ್ಷ ಸೇರಿರುವ ಬಿಆರ್‌ಎಸ್‌ನ 10 ಶಾಸಕರಿಗೆ ಸೀರೆ ಹಾಗೂ ಬಳೆಗಳನ್ನು ಉಡುಗೊರೆಯಾಗಿ ಕಳಿಸುವೆ. ಅವುಗಳನ್ನು ಅವರು ಧರಿಸಲಿ’ ಎಂದಿದ್ದರು.
ಕಳೆದ ವರ್ಷ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷ ಹೀನಾಯವಾಗಿ ಸೋತ ನಂತರ, ಆ ಪಕ್ಷದ 10 ಶಾಸಕರು ಹಾಗೂ ಕೆಲ ವಿಧಾನಪರಿಷತ್ ಸದಸ್ಯರು ಕಾಂಗ್ರೆಸ್ ಸೇರಿದ್ದಾರೆ.