ಭೋಪಾಲ್: ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಜತೆ ಗೊಂಡವಾನ ಗಣತಂತ್ರ ಪಾರ್ಟಿಯು (ಜಿಜಿಪಿ) ಮೈತ್ರಿ ಮಾಡಿಕೊಂಡಿದೆ.
ಒಟ್ಟು 230 ಸ್ಥಾನಗಳ ಪೈಕಿ, 178 ಸ್ಥಾನಗಳಲ್ಲಿ ಬಿಎಸ್‌ಪಿ ಸ್ಪರ್ಧಿಸಲಿದ್ದರೆ 52 ಸ್ಥಾನಗಳಲ್ಲಿ ಜಿಜಿಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಬಿಎಸ್‌ಪಿ ರಾಜ್ಯಸಭಾ ಸದಸ್ಯ ರಾಮ್‌ಜಿ ಗೌತಮ್ ಹಾಗೂ ಜಿಜಿಪಿಯ ಪ್ರಧಾನ ಕಾರ್ಯದರ್ಶಿ ಬಲಬೀರ್ ಸಿಂಗ್ ತೋಮರ್ ಹೇಳಿದ್ದಾರೆ.
‘ದಲಿತರು, ಬುಡಕಟ್ಟು ಜನರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಕೊನೆಗಾಣಿಸುವ ಸಂಬಂಧ ಬಿಎಸ್‌ಪಿ–ಜಿಜಿಪಿ ಮೈತ್ರಿ ಸರ್ಕಾರವನ್ನು ರಚಿಸಲಾಗುವುದು. ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮತ್ತು ಕಾಂಗ್ರೆಸ್‌ನ ಸರ್ವಾಧಿಕಾರ ಮತ್ತು ಬಂಡವಾಳಶಾಹಿಗಳ ಆಡಳಿತವೂ ಅಂತ್ಯ ಕಾಣುವುದು. ಬಡವರಿಗೆ ನ್ಯಾಯವೂ ಸಿಗಲಿದೆ’ ಎಂದು ಉಭಯ ಪಕ್ಷದ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಪೈಕಿ ಒಬ್ಬ ಶಾಸಕ ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಮೂರು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಜಿಜಿಪಿ, 1998ರಲ್ಲಿ ಒಂದು ಸ್ಥಾನದಲ್ಲಿ ಗೆದ್ದಿತ್ತು. ನಂತರ, 2003ರಲ್ಲಿ ಮೂರು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.