ನವದೆಹಲಿ: ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ತೊಡಗಿದ ಆರೋಪದಡಿ ವ್ಯಕ್ತಿಯೊಬ್ಬರ ಮನೆಯನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದ ಘಟನೆಯು ಸ್ವೀಕಾರಾರ್ಹವಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆಯನ್ನು ನಿರ್ಧರಿಸುತ್ತದೆ. ಆರೋಪಿಯ ಕುಟುಂಬವನ್ನು ಶಿಕ್ಷಿಸುವುದು, ಅವರ ಸೂರನ್ನು ಧ್ವಂಸಗೊಳಿಸುವುದು, ಕಾನೂನನ್ನು ಪಾಲನೆ ಮಾಡದಿರುವುದು, ನ್ಯಾಯಾಲಯಕ್ಕೆ ಅವಿಧೇಯತೆ ತೋರುವುದು ಇದು ಸರಿಯಲ್ಲ. ಇದು ನ್ಯಾಯವಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಇದು ಅನಾಗರಿಕತೆ ಮತ್ತು ಅನ್ಯಾಯದ ಪರಮಾವಧಿ ಎಂದಿರುವ ಪ್ರಿಯಾಂಕಾ, ಕಾನೂನು ರಚಿಸುವವರು, ಕಾನೂನು ಪಾಲಿಸುವವರು ಹಾಗೂ ಕಾನೂನು ಉಲ್ಲಂಘಿಸುವವರ ನಡುವೆ ವ್ಯತ್ಯಾಸವಿರಬೇಕು. ಸರ್ಕಾರಗಳು ಅಪರಾಧಿಗಳಂತೆ ವರ್ತಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ
‘ರಾಜಧರ್ಮ ಪೂರೈಸಲು ಸಾಧ್ಯವಾಗದವರು ಸಮಾಜ ಅಥವಾ ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಬುಲ್ಡೋಜರ್ ಪದ್ಧತಿ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ, ಇದು ನಿಲ್ಲಬೇಕು’ ಎಂದು ಪ್ರಿಯಾಂಕಾ ಒತ್ತಾಯಿಸಿದ್ದಾರೆ.
ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಆರೋಪಿ ಶಹಜಾದ್ ಅಲಿ ಅವರ ಮನೆಯನ್ನು ಕೆಡವಲಾಗಿದೆ. ಹಿಂಸಾಚಾರ ನಡೆಸಿದ ಆರೋಪದಡಿ 150 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಮಗಿರಿ ಮಹಾರಾಜರ ಆಕ್ಷೇಪಾರ್ಹ ಹೇಳಿಕೆ ವಿರೋಧಿಸಿ ಮುಸ್ಲಿಂ ಸಮುದಾಯದವರು ನಡೆಸಿದ ಪ್ರತಿಭಟನೆಯು ಹಿಂಸಾಚಾರದ ಸ್ವರೂಪ ಪಡೆದುಕೊಂಡಿತ್ತು. ಈ ವೇಳೆ ಹಲವು ವಾಹನಗಳಿಗೆ ಹಾನಿಯಾಗಿದ್ದು, ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದವು.
अगर कोई किसी अपराध का आरोपी है तो उसका अपराध और उसकी सजा सिर्फ अदालत तय कर सकती है। लेकिन आरोप लगते ही आरोपी के परिवार को सजा देना, उनके सिर से छत छीन लेना, कानून का पालन न करना, अदालत की अवहेलना करना, आरोप लगते ही आरोपी का घर ढहा देना- यह न्याय नहीं है। यह बर्बरता और अन्याय की…
— Priyanka Gandhi Vadra (@priyankagandhi) August 24, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.