ನವದೆಹಲಿ: ‘ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯೂ ಕೇವಲ ಸರ್ಕಾರ ರಚನೆಗಷ್ಟೇ ಸೀಮಿತವಲ್ಲ. ರಾಜ್ಯ ಹಾಗೂ ವಿಧಾನಸಭೆಯ ಸ್ಥಾನಮಾನ ಪುನರ್ ಸ್ಥಾನಮಾನ, ಕಳೆದುಹೋದ ಘನತೆ ಮತ್ತೆ ಪಡೆದುಕೊಳ್ಳುವುದಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಘಟಕದ ಅಧ್ಯಕ್ಷ ತಾರೀಕ್ ಹಮೀದ್ ಕರ‍್ರ ತಿಳಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟವು ರಾಜ್ಯದಲ್ಲಿ ಸರಳ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ. ಪಿಡಿಪಿ ಮೈತ್ರಿಕೂಟಕ್ಕೆ ಗೆಲ್ಲುವ ಅವಕಾಶಗಳೇ ಇಲ್ಲ’ ಎಂದು ತಿಳಿಸಿದರು.
ಮೈತ್ರಿಕೂಟ ಗೆದ್ದರೆ, ಮುಖ್ಯಮಂತ್ರಿ ಸ್ಥಾನವನ್ನು ನ್ಯಾಷನಲ್ ಕಾನ್ಫರೆನ್ಸ್‌ಗೆ ಬಿಟ್ಟುಕೊಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಚುನಾವಣೆಯ ನಂತರ ಚರ್ಚಿಸಬೇಕಾದ ವಿಚಾರವನ್ನು ಈಗಲೇ ಊಹಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.