ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಫಲಿತಾಂಶ ಪರಿಸ್ಥಿತಿ ಬದಲಾಯಿಸಿದೆ: ಶರದ್ ಪವಾರ್

ಸಾಮಾಜಿಕ ವಿಭಜನೆ ಮತ್ತು ಕೋಮುಶಕ್ತಿಗಳ ವಿರುದ್ಧ ಹೋರಾಡುವ ಸವಾಲು
Published 21 ಮೇ 2023, 12:46 IST
Last Updated 21 ಮೇ 2023, 12:46 IST
ಅಕ್ಷರ ಗಾತ್ರ

ಮುಂಬೈ: ‘ದೇಶದಲ್ಲಿ ಸಾಮಾಜಿಕ ಮತ್ತು ಕೋಮು ವಿಭಜನೆಯನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುವ ಶಕ್ತಿಗಳ ವಿರುದ್ಧ ಹೋರಾಡುವುದು ಎಲ್ಲರ ಮುಂದಿರುವ ಸವಾಲಾಗಿದೆ. ಆದರೆ, ಕರ್ನಾಟಕ ವಿಧಾನಸಭಾ ಚುನಾವಣೆಯ ಫಲತಾಂಶದಿಂದಾಗಿ ಪರಿಸ್ಥಿತಿ ಕ್ರಮೇಣ ಬದಲಾಗುವಂತೆ ತೋರುತ್ತಿದೆ’ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಭಾನುವಾರ ಹೇಳಿದ್ದಾರೆ. 

ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ದುಡಿಯುವ ವರ್ಗವು ಸದೃಢ ಮತ್ತು ಒಗ್ಗಟ್ಟು ಪ್ರದರ್ಶಿಸಿದರೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಂಡ ಫಲಿತಾಂಶವನ್ನು ದೇಶದ ಇತರೆಡೆಯೂ ಪುನರಾವರ್ತಿಸಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘ದೇಶವನ್ನು ಆಳುತ್ತಿರುವ ಕೆಲವು ಶಕ್ತಿಗಳು ಸಮಾಜದಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಉದ್ವಿಗ್ನತೆಯನ್ನು ಉಂಟುಮಾಡುವ ಮೂಲಕ ಅದನ್ನು ಹಿಂದಕ್ಕೆ ಕೊಂಡೊಯ್ಯುತ್ತಿವೆ. ಅವರು ಅಧಿಕಾರವನ್ನು ಜನರ ಕಲ್ಯಾಣಕ್ಕಾಗಿ ಬಳಸುತ್ತಿಲ್ಲ, ಬದಲಿಗೆ ಜನರ ನಡುವೆ ಒಡಕು ಮೂಡಿಸಲು ಬಳಸುತ್ತಿದ್ದಾರೆ’ ಎಂದು ಆರೋಪಿಸಿದ ಅವರು, ‘ಇಂಥ ಶಕ್ತಿಗಳ ವಿರುದ್ಧ ಹೋರಾಡುವುದು ಅಗತ್ಯ. ಇಲ್ಲದಿದ್ದರೆ ಜನಸಾಮಾನ್ಯರು ನಾಶವಾಗುತ್ತಾರೆ’ ಎಂದರು. 

‘ಕರ್ನಾಟಕದಲ್ಲಿ ಜನಸಾಮಾನ್ಯರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಶೇ 70ರಷ್ಟು ಯುವಕರು ವಿವಿಧ ಸ್ತರಗಳಿಂದ ಬಂದವರಿದ್ದರು.  ದುಡಿಯುವ ವರ್ಗ ಸದೃಢವಾಗಿ ಮತ್ತು ಒಗ್ಗಟ್ಟಾಗಿ ಉಳಿದರೆ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಂಡದ್ದನ್ನು ದೇಶದ ಇತರೆಡೆಯೂ ಪುನರಾವರ್ತಿಸಬಹುದು’ ಎಂದು ಪವಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT