ಚೆನ್ನೈ: ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಸಿಗುವ ಮಣ್ಣು ಚಂದ್ರನ ಮೇಲ್ಮೈ ಮಣ್ಣಿನ ಗುಣಲಕ್ಷಣಗಳನ್ನೇ ಹೋಲುತ್ತಿರುವುದರಿಂದ ಈ ಮಣ್ಣನ್ನು ಚಂದ್ರಯಾನ ಯೋಜನೆಯಲ್ಲಿ ಸಾಫ್ಟ್ ಲ್ಯಾಂಡಿಂಗ್‌ನಂತಹ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಬಳಸಲಾಗುತ್ತಿದೆ.
2012ರಿಂದಲೂ ಇಲ್ಲಿನ ಮಣ್ಣನ್ನು ಚಂದ್ರಯಾನ ಯೋಜನೆಯಲ್ಲಿ ಬಳಸಲಾಗುತ್ತಿದೆ. ಲ್ಯಾಂಡರ್‌ನ ಸಾಫ್ಟ್ ಲ್ಯಾಂಡಿಂಗ್ ಸಾಮರ್ಥ್ಯವನ್ನು ಅಳೆಯಲು ಇದು ಸಹಾಯಕವಾಗಿದೆ. ಇಲ್ಲಿಯವರೆಗೆ ಮೂರು ಬಾರಿ ಈ ಮಣ್ಣನ್ನು ಇಸ್ರೊಗೆ ಪೂರೈಸಲಾಗಿದೆ.
‘ನಾಮಕ್ಕಲ್‌ನಲ್ಲಿರುವ ಮಣ್ಣು ಚಂದ್ರನ ಮೇಲ್ಮೈಯಲ್ಲಿ ಇರುವಂತಹ ಮಣ್ಣಿಗೆ ಹೋಲುತ್ತದೆ. ವಿಶೇಷವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿರುವ ಮಣ್ಣನ್ನು ಹೋಲುತ್ತದೆ. ಚಂದ್ರನ ಮೇಲಿರುವ ಮಣ್ಣು 'ಅನಾರ್ತೊಸೈಟ್' (ಒಂದು ರೀತಿಯ ಅಗ್ನಿಶಿಲೆ) ಮಣ್ಣಿನ ಪ್ರಕಾರವಿದೆ’ ಎಂದು ಪೆರಿಯಾರ್ ವಿಶ್ವವಿದ್ಯಾನಿಲಯದ ಭೂವಿಜ್ಞಾನ ವಿಭಾಗದ ನಿರ್ದೇಶಕ ಪ್ರೊಫೆಸರ್ ಎಸ್ ಅನ್ಬಳಗನ್ ತಿಳಿಸಿದರು.
‘ನಾಮಕ್ಕಲ್ ಪ್ರದೇಶದಲ್ಲಿ ಚಂದ್ರನ ಮಣ್ಣಿಗೆ ಹೋಲುವ ಮಣ್ಣು ಹೇರಳವಾಗಿ ಲಭ್ಯವಿದ್ದು, ಇಸ್ರೋಗೆ ಅಗತ್ಯವಿರುವ ಸಂದರ್ಭಕ್ಕೆ ಮಣ್ಣನ್ನು ಪೂರೈಸಲಾಗುತ್ತಿದೆ. ಚಂದ್ರಯಾನ ಯೋಜನೆಗಳು ಘೋಷಣೆಯಾದ ತಕ್ಷಣ ಮಣ್ಣು ಪೂರೈಸುವ ಕೆಲಸ ಪ್ರಾರಂಭವಾಗುತ್ತದೆ’ ಎಂದರು.
‘ವಿವಿಧ ಪರೀಕ್ಷೆಗಳನ್ನು ಕೈಗೊಂಡ ನಂತರವೇ ನಾಮಕ್ಕಲ್ ಪ್ರದೇಶದಲ್ಲಿನ ಮಣ್ಣು ಮತ್ತು ಚಂದ್ರನ ಮೇಲ್ಮೈ ಮಣ್ಣಿಗೆ ಸಾಮತ್ಯೆವಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇಲ್ಲಿಯವರೆಗೆ ಸುಮಾರು 50 ಟನ್ ಮಣ್ಣನ್ನು ಇಸ್ರೊಗೆ ಕಳುಹಿಸಲಾಗಿದೆ’ ಎಂದು ಅನ್ಬಳಗನ್ ಹೇಳಿದರು.
‘ನಾಮಕ್ಕಲ್ ಸುತ್ತಮುತ್ತಲಿನ ಗ್ರಾಮಗಳಾದ ಸೀತಾಂಪೂಂಡಿ ಮತ್ತು ಕುನ್ನಮಲೈ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಈ ಮಣ್ಣು ಹೇರಳವಾಗಿ ಸಿಗುತ್ತದೆ. ನಮ್ಮಿಂದ ಪೂರೈಕೆಯಾದ ಮಣ್ಣಿನಿಂದಲೇ ವಿಜ್ಞಾನಿಗಳು ಪರೀಕ್ಷೆ ನಡೆಸುತ್ತಿದ್ದಾರೆ. ಚಂದ್ರಯಾನ–4 ಯೋಜನೆ ಘೋಷಣೆಯಾದರೂ ನಾವು ಮಣ್ಣು ಪೂರೈಸಲು ಸಿದ್ದ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.