ನಾರಾಯಣಪುರ: ಛತ್ತೀಸಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳಾ ನಕ್ಸಲರು ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಾರಾಯಣಪುರ ಹಾಗೂ ಕಂಕೇರ್ ಜಿಲ್ಲೆಯ ಅಬ್ದುಜಮಾಡ್ ಪ್ರದೇಶದಲ್ಲಿ ಬೆಳಿಗ್ಗೆ 8 ಗಂಟೆಗೆ ಭದ್ರತಾ ಪಡೆಗಳ ಜಂಟಿ ತಂಡ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯಿತು. ವಿಶೇಷ ಟಾಸ್ಕ್‌ಫೋರ್ಸ್ (ಎಸ್‌ಟಿಎಫ್), ಜಿಲ್ಲಾ ಮೀಸಲು ಪೊಲೀಸ್ ಪಡೆ (ಡಿಆರ್‌ಜಿ) ಹಾಗೂ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದರು ಎಂದರು.
ಸಮವಸ್ತ್ರ ಧರಿಸಿದ್ದ ಮೂವರು ಮಹಿಳಾ ನಕ್ಸಲರ ಮೃತದೇಹಗಳು ಪತ್ತೆಯಾಗಿವೆ. ಸ್ಥಳದಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
‘ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಈ ವರ್ಷ ರಾಜ್ಯದ ವಿವಿಧೆಡೆ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 145 ಮಂದಿ ನಕ್ಸಲರು ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.