ನವದೆಹಲಿ: ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡುವ ಹಣದ ಮೂಲ ಕುರಿತು ಮಾಹಿತಿ ಪಡೆದುಕೊಳ್ಳುವ ಹಕ್ಕನ್ನು ಜನರು ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಆ ಮೂಲಕ ಚುನಾವಣಾ ಬಾಂಡ್ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.
‘ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯು ‘ಚೊಕ್ಕ ಹಣ’ವಾಗಿದ್ದು, ಸಂವಿಧಾನದ 19(1)(ಎ) ವಿಧಿಯಡಿ ಮಾಹಿತಿ ಪಡೆಯುವ ಹಕ್ಕನ್ನು ಜನರು ಹೊಂದಿಲ್ಲ. ಯಾವುದೇ ವಿಷಯ ಕುರಿತು ಹಾಗೂ ಎಲ್ಲವನ್ನು ತಿಳಿದುಕೊಳ್ಳುವ ಅನಿರ್ಬಂಧಿತ ಹಕ್ಕು ಎಂಬುದು ಇರುವುದಿಲ್ಲ’ ಎಂದು ಅವರು ವಿವರಿಸಿದ್ದಾರೆ.
ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠವು, ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಅ. 31ರಂದು ನಡೆಸಲಿದೆ. ಹೀಗಾಗಿ, ಅಟಾರ್ನಿ ಜನರಲ್ ಅವರು ಸಲ್ಲಿಸಿರುವ ಈ ಹೇಳಿಕೆಗೆ ಮಹತ್ವ ಬಂದಿದೆ.
‘ರಾಜಕೀಯ ಪಕ್ಷಗಳಿಗೆ ನೀಡುವ ಹಣದ ಮೂಲ ಕುರಿತ ಮಾಹಿತಿಯ ಗೋಪ್ಯತೆಯನ್ನು ಕಾಪಾಡಲಾಗುತ್ತದೆ. ದೇಣಿಗೆ ನೀಡುವವರಿಗೆ ಇಂತಹ ಗೋಪ್ಯತೆಯ ಪ್ರಯೋಜನವನ್ನು ಈ ಯೋಜನೆ ನೀಡುತ್ತದೆ. ಅಲ್ಲದೇ, ಅಕ್ರಮ ಹಣವನ್ನು ನೀಡಲಾಗುವುದಿಲ್ಲ ಹಾಗೂ ತೆರಿಗೆಗೆ ಸಂಬಂಧಿಸಿದ ಕರಾರುಗಳಿಗೆ ಅನುಗುಣವಾಗಿಯೇ ದೇಣಿಗೆಯನ್ನು ನೀಡಲಾಗುತ್ತದೆ ಎಂಬುದನ್ನು ಯೋಜನೆಯು ಖಾತ್ರಿಪಡಿಸುತ್ತದೆ’ ಎಂದೂ ವಿವರಿಸಿದ್ದಾರೆ.
ಚುನಾವಣಾ ಬಾಂಡ್ ಯೋಜನೆ ಜಾರಿ ಕುರಿತು ಕೇಂದ್ರ ಸರ್ಕಾರ 2018ರ ಜನವರಿ 2ರಂದು ಅಧಿಸೂಚನೆ ಹೊರಡಿಸಿತ್ತು.
ಈ ಯೋಜನೆಯ ಸಿಂಧುತ್ವ ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್, ಸಿಪಿಎಂ ಸಲ್ಲಿಸಿರುವುದೂ ಸೇರಿದಂತೆ ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.