ಭುವನೇಶ್ವರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಜೊತೆ ಕೈಜೋಡಿಸಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ದೇಶದ ಹಳೆಯ ಪಕ್ಷವು ಅಧಿಕಾರದ ಹಸಿವಿನಲ್ಲಿದೆ ಎಂದು ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಆದಷ್ಟು ಶೀಘ್ರದಲ್ಲೇ ಪುನಃ ಸ್ಥಾಪಿಸುವ ದೃಢವಾದ ಬದ್ಧತೆಯನ್ನು ಕಾಂಗ್ರೆಸ್ ಹಾಗೂ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಹೊಂದಿವೆ ಎಂಬ ಹೇಳಿಕೆಗೆ ಸ್ಪಷ್ಟೀಕರಣ ನೀಡುವಂತೆ ರಾಹುಲ್ ಗಾಂಧಿಗೆ ಆಗ್ರಹಿಸಿದ್ದಾರೆ.
‘ಮತ್ತೊಮ್ಮೆ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿಯನ್ನು ಕಾಂಗ್ರೆಸ್ ಬಯಸುತ್ತದೆಯೇ?, ಪಾಕಿಸ್ತಾನದೊಂದಿಗೆ ವ್ಯಾಪಾರವನ್ನು ತೆರೆಯುವ ಮೂಲಕ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತದೆಯೇ?, ಇದು ಸ್ಥಳೀಯ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಿಲ್ಲವೇ?‘ ಎಂದು ಅವರು ಪ್ರಶ್ನಿಸಿದ್ದಾರೆ.
‘ಭಯೋತ್ಪಾದನೆ ಮತ್ತು ಕಲ್ಲು ತೂರಾಟ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಸರ್ಕಾರಿ ಉದ್ಯೋಗ ನೀಡುವ ನ್ಯಾಷನಲ್ ಕಾನ್ಫರೆನ್ಸ್ ನಿರ್ಧಾರವನ್ನು ಕಾಂಗ್ರೆಸ್ ಬೆಂಬಲಿಸುತ್ತದೆಯೇ?, ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಾಲುದಾರರಿಂದ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸುವ ಸಂಚು ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ವಿವರಿಸಬೇಕು’ ಎಂದು ಮಾಝಿ ಆಗ್ರಹಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಒಟ್ಟು 90 ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸೆ.18ರಂದು 24 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಸೆ. 25ರಂದು 2ನೇ ಹಂತ ಹಾಗೂ ಅ. 1ರಂದು ಮೂರನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ. ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.