ನವದೆಹಲಿ: ಕಾಂಗ್ರೆಸ್ ಪಕ್ಷವು ‘ಸಂವಿಧಾನ್ ರಕ್ಷಕ್’ ಅಭಿಯಾನಕ್ಕೆ ದೇಶದಾದ್ಯಂತ ಶುಕ್ರವಾರ ಚಾಲನೆ ನೀಡಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಆರಂಭವಾಗಿರುವ ಈ ಅಭಿಯಾನವು 100 ದಿನ ನಡೆಯಲಿದೆ.
75 ವರ್ಷಗಳ ಹಿಂದೆ ಸಂವಿಧಾನವನ್ನು ಅಳವಡಿಸಿಕೊಂಡ ದಿನದ ಸ್ಮರಣಾರ್ಥ ನವೆಂಬರ್ 26ರಂದು ನವದೆಹಲಿಯಲ್ಲಿ ಅಭಿಯಾನವು ಸಮಾಪ್ತಿಗೊಳ್ಳಲಿದೆ.
ದೆಹಲಿಯಲ್ಲಿ ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಕನ್ ಅವರು, ‘ಭಾರತವು ಸಂವಿಧಾನವನ್ನು ಹೊಂದಿರುವುದರಿಂದಲೇ ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ ಈಗಲೂ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿದೆ. ಇಂಥ ಸಂವಿಧಾನವನ್ನು ಆಡಳಿತಾರೂಢ ಬಿಜೆಪಿ ದಾಳಿಯಿಂದ ರಕ್ಷಿಸಬೇಕಿದೆ’ ಎಂದು ಹೇಳಿದರು.