ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೊಹಬ್ಬತ್‌ ಕಿ ದುಕಾನ್‌’ ವಿಡಿಯೊ ಹಂಚಿಕೊಂಡ ಕಾಂಗ್ರೆಸ್

‘ಬಿಜೆಪಿಯ ವಿಭಜಕ ರಾಜಕಾರಣ’ಕ್ಕೆ ತಿರುಗೇಟು ನೀಡುವ ತಂತ್ರ
Published 27 ಜೂನ್ 2023, 14:23 IST
Last Updated 27 ಜೂನ್ 2023, 14:23 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಾಗಲು ಎಲ್ಲ ವಿರೋಧ ಪಕ್ಷಗಳು ಸರಣಿ ಸಭೆಗಳನ್ನು ನಡೆಸುತ್ತಿವೆ. ಇನ್ನೊಂದೆಡೆ, ಕಾಂಗ್ರೆಸ್‌ ಪಕ್ಷವು ಮಂಗಳವಾರ ‘ಮೊಹಬ್ಬತ್‌ ಕಿ ದುಕಾನ್‌’ ಹೆಸರಿನ ಅನಿಮೇಷನ್‌ನ ವಿಡಿಯೊವೊಂದನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಚುನಾವಣಾ ಪ್ರಚಾರವನ್ನು ರಂಗೇರಿಸುವ ಸೂಚನೆ ನೀಡಿದೆ.

‘ನಫ್ರತ್‌ ಕಾ ಬಜಾರ್‌’ (ದ್ವೇಷದ ಮಾರುಕಟ್ಟೆ) ಎಂಬ ಫಲಕವನ್ನು ರಾಹುಲ್‌ ಗಾಂಧಿ ಅವರು ತೆಗೆದು ಹಾಕಿ ‘ಮೊಹಬ್ಬತ್‌ ಕಿ ದುಕಾನ್’ (ಪ್ರೀತಿಯ ಅಂಗಡಿ) ಎಂಬ ಫಲಕವನ್ನು ಅಳವಡಿಸುವ ದೃಶ್ಯಗಳು ಈ ವಿಡಿಯೊದಲ್ಲಿವೆ.

ಆದರೆ, ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ಕುರಿತು ಈ ವಿಡಿಯೊದಲ್ಲಿ ಎಲ್ಲಿಯೂ ಪ್ರಸ್ತಾಪ ಇಲ್ಲ. ಭಾರತ್‌ ಜೋಡೊ ಯಾತ್ರೆ ಮೂಲಕ ರಾಹುಲ್‌ ಗಾಂಧಿ ಅವರು ಜನರನ್ನು ಒಗ್ಗೂಡಿಸುವ ಶಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು 1.43 ನಿಮಿಷಗಳ ಈ ವಿಡಿಯೊದಲ್ಲಿ ತೋರಿಸಲಾಗಿದೆ.

ಹಲವಾರು ಕಾರ್ಯಕ್ರಮಗಳ ಮೂಲಕ ಸಮಾಜದ ವಿವಿಧ ವರ್ಗಗಳ ಏಳಿಗೆಗೆ ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ಭಾರತವನ್ನು ದೊಡ್ಡ ಆರ್ಥಿಕ ಶಕ್ತಿಯನ್ನಾಗಿ ರೂಪಿಸುತ್ತಿದ್ದಾರೆ ಎಂಬ ವಿಡಿಯೊವೊಂದನ್ನು ಇತ್ತೀಚೆಗೆ ಬಿಜೆಪಿ ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ, ಈಗ ಕಾಂಗ್ರೆಸ್‌ ಈ ವಿಡಿಯೊ ಬಿಡುಗಡೆ ಮಾಡಿದೆ.

ಒಂದು ರಥವನ್ನು ಮುನ್ನಡೆಸುವ ಪಾತ್ರಧಾರಿಯಾಗಿ ಪ್ರಧಾನಿಯವರನ್ನು ಚಿತ್ರಿಸಲಾಗಿದ್ದು, ಪ್ರಜಾಪ್ರಭುತ್ವ, ಮಾಧ್ಯಮ ಹಾಗೂ ಅಧಿಕಾರಶಾಹಿಯನ್ನು ರಥದ ಮೇಲೆ ಸರಪಳಿಗಳಿಂದ ಕಟ್ಟಿ ಹಾಕಿರುವಂತೆ ತೋರಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದೂ ಮತ್ತು ಮುಸ್ಲಿಮರ ನಡುವೆ ಕಂದಕ ಸೃಷ್ಟಿಸುತ್ತಿರುವಂತೆಯೂ ತೋರಿಸಲಾಗಿದೆ. ಆಗ, ರಾಹುಲ್‌ ಗಾಂಧಿ ಅವರ ಪ್ರವೇಶವಾಗುತ್ತದೆ. ಅವರು ಕಚ್ಚಾಟವನ್ನು ಕೊನೆಗೊಳಿಸಿ, ಹಿಂದೂ–ಮುಸ್ಲಿಮರನ್ನು ಒಂದಗೂಡಿಸುತ್ತಿರುವಂತೆ ಚಿತ್ರಿಸಲಾಗಿದೆ.

ಎಲ್ಲ ದೇಶವಾಸಿಗಳನ್ನು ಒಟ್ಟಾಗಿ ತಮ್ಮೊಂದಿಗೆ ಕರೆದುಕೊಂಡು ರಾಹುಲ್‌ ಗಾಂಧಿ ಸಾಗುತ್ತಾರೆ. ರಾಜ್‌ಕಪೂರ್‌ ಅವರ ಚಿತ್ರ ‘ಅನಾಡಿ’ಯ ‘ಕಿಸಿ ಕಿ ಮುಸ್ಕುರಾಹಟೋ ಪೆ ಹೋ ನಿಸಾರ್’ ಎಂಬ ಗೀತೆಯ ಸಾಲುಗಳು ಹಿನ್ನೆಲೆಯಲ್ಲಿ ಬಿತ್ತರವಾಗುತ್ತವೆ.

ಅಲ್ಲದೇ, ‘ಸಭಿ ಕೆ ವಾಸ್ತೆ ಹೊ ಜಿಸ್‌ಕೆ ದಿಲ್‌ ಮೇ ಪ್ಯಾರ್, ಗಾಂಧಿ ಉಸಿ ಕಾ ನಾಮ್‌ ಹೈ’ ಎಂಬ ಸಾಲುಗಳೊಂದಿಗೆ ವಿಡಿಯೊ ಕೊನೆಗೊಳ್ಳುತ್ತದೆ.

ಟ್ರಕ್‌ವೊಂದನ್ನು ಚಾಲನೆ ಮಾಡುತ್ತಾ ರಾಹುಲ್‌ ಸಾಗಿದಂತೆ, ‘ನಫ್ರತ್‌ ಕಾ ಬಜಾರ್‌’ ಎಂಬ ಫಲಕಗಳು ಬಿದ್ದು ಹೋಗುತ್ತವೆ. ಬೆನ್ನಲ್ಲೇ, ‘ಮೊಹಬ್ಬತ್‌ ಕಿ ದುಕಾನ್‌’ ಎಂಬ ಫಲಕಗಳು ಎದ್ದು ನಿಲ್ಲುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT