ನವದೆಹಲಿ: ಸಂರಕ್ಷಿತ ಮೀಸಲು ಪ್ರದೇಶ ಹಾಗೂ ಸಮುದಾಯ ಮೀಸಲು ಪ್ರದೇಶ ಎಂಬುದಾಗಿ ಘೋಷಿಸಲಾಗಿರುವ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ನಿಷೇಧಿಸಬಹುದೇ ಎಂಬುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ವನ್ಯಜೀವಿಗಳು ಒಂದು ರಾಷ್ಟ್ರೀಯ ಉದ್ಯಾನದಿಂದ ಮತ್ತೊಂದು ವನ್ಯಧಾಮಕ್ಕೆ ಮುಕ್ತವಾಗಿ ಸಂಚರಿಸುವುದಕ್ಕೆ ಕಾರಿಡಾರ್ ಕಲ್ಪಿಸುವ ಉದ್ದೇಶದಿಂದ ಸಂರಕ್ಷಿತ ಮೀಸಲು ಪ್ರದೇಶ ಹಾಗೂ ಸಮುದಾಯ ಮೀಸಲು ಪ್ರದೇಶಗಳನ್ನು ಘೋಷಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಪಿ.ಕೆ.ಮಿಶ್ರಾ ಹಾಗೂ ಕೆ.ವಿ.ವಿಶ್ವನಾಥನ್ ಅವರು ಇದ್ದ ನ್ಯಾಯಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.
‘ಸಂರಕ್ಷಿತ ಮೀಸಲು ಪ್ರದೇಶ ಹಾಗೂ ಸಮುದಾಯ ಮೀಸಲು ಪ್ರದೇಶಗಳು, ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಕಾರಿಡಾರ್‌ಗಳಂತೆ ಅನುಕೂಲ ಕಲ್ಪಿಸುತ್ತಿದ್ದರೆ, ಇಂತಹ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸುವುದು ವನ್ಯಜೀವಿಗಳ ಚಲನವಲನಕ್ಕೆ ಮಾರಕವಾಗಲಿದೆ’ ಎಂದು ನ್ಯಾಯಪೀಠ ಹೇಳಿತು.
‘ಈ ಕಾರಣಕ್ಕೆ, ಇಂತಹ ಪ್ರದೇಶಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲು ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ’ ಎಂದು ನ್ಯಾಯಮೂರ್ತಿಗಳು ಹೇಳಿದರು.
ಸಂರಕ್ಷಿತ ಮೀಸಲು ಪ್ರದೇಶ ಹಾಗೂ ಸಮುದಾಯ ಮೀಸಲು ಪ್ರದೇಶಗಳನ್ನು ರಾಷ್ಟ್ರೀಯ ಉದ್ಯಾನಗಳು/ವನ್ಯಜೀವಿ ಧಾಮಗಳೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ ಎಂಬ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಅಕ್ಟೋಬರ್‌ಗೆ ಮುಂದೂಡಿತು.
ಸಂರಕ್ಷಿತ ಮೀಸಲು ಪ್ರದೇಶ ಹಾಗೂ ಸಮುದಾಯ ಮೀಸಲು ಪ್ರದೇಶದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಲಾಗಿದೆ.