ಮುಂಬೈ: ಪಶ್ಚಿಮ ರೈಲ್ವೆಯ (ಡಬ್ಲ್ಯುಆರ್) ಬೋರಿವಲಿ ಮತ್ತು ವಿರಾರ್ ನಿಲ್ದಾಣಗಳ ನಡುವೆ ಐದು ಮತ್ತು ಆರನೇ ಮಾರ್ಗಗಳ ನಿರ್ಮಾಣ ಯೋಜನೆಯು ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ತಗ್ಗಿಸಲಿದೆ. ಜತೆಗೆ ಅಮೂಲ್ಯವಾದ ಇಂಧನ ಉಳಿತಾಯವನ್ನೂ ಮಾಡಲಿದೆ ಎಂದು ಹೇಳಿರುವ ಬಾಂಬೆ ಹೈಕೋರ್ಟ್, ಈ ಯೋಜನೆಗಾಗಿ ಮ್ಯಾಂಗ್ರೋವ್ ಮರಗಳನ್ನು ಕತ್ತರಿಸಲು ಅನುಮತಿ ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅಮಿತ್ ಬೋರ್‌ಕರ್ ಅವರಿದ್ದ ವಿಭಾಗೀಯ ಪೀಠವು, ಮುಂಬೈ ಉಪನಗರ ರೈಲು ಮಾರ್ಗದಲ್ಲಿ ಹೊಸ ಮಾರ್ಗಗಳಿಗೆ ಅಗತ್ಯವಿರುವ ಭೂಮಿಯಲ್ಲಿರುವ 2,612 ಮ್ಯಾಂಗ್ರೋವ್ ಮರಗಗಳನ್ನು ಕತ್ತರಿಸಲು ಪಶ್ಚಿಮ ರೈಲ್ವೆಗೆ ಅನುಮತಿ ನೀಡಿದೆ.
ಪೀಠವು ಆಗಸ್ಟ್ 30ರಂದು ನೀಡಿರುವ ಆದೇಶದ ಪ್ರತಿ ಗುರುವಾರ ಲಭ್ಯವಾಗಿದ್ದು, ‘ಈ ಯೋಜನೆಯಲ್ಲಿ ಅಗಾಧವಾದ ಸಾರ್ವಜನಿಕ ಹಿತಾಸಕ್ತಿ ಇದೆ ಮತ್ತು ಗಮನಾರ್ಹವಾದ ಪರಿಸರ ಪ್ರಯೋಜನಗಳನ್ನು ಹೊಂದಿದೆ. ರೈಲ್ವೆ ವ್ಯವಸ್ಥೆಯು ಪರಿಸರ ಸ್ನೇಹಿ ಸಮೂಹ ಸಾರಿಗೆಯಾಗಿದೆ ಮತ್ತು ವಿಶ್ವದಲ್ಲೇ ಅತ್ಯಂತ ಪರಿಣಾಮಕಾರಿಯಾಗಿದೆ’ ಎಂದು ಪೀಠವು ಹೇಳಿದೆ.
ಈ ಹಿಂದಿನ ತೀರ್ಪಿನ ಪ್ರಕಾರ, ಮುಂಬೈ ಪ್ರದೇಶದಲ್ಲಿ ಮ್ಯಾಂಗ್ರೋವ್ ಮರಗಳನ್ನು ಕಡಿಯಲು ಹೈಕೋರ್ಟ್‌ನ ಅನುಮತಿ ಅಗತ್ಯವಿದೆ. ಉಪ ನಗರ ರೈಲ್ವೆ ಯೋಜನೆ 5 ಮತ್ತು 6ನೇ ಮಾರ್ಗಕ್ಕೆ ಅಡ್ಡಿಯಾಗಿರುವ ಮ್ಯಾಂಗ್ರೋವ್ ಮರಗಳನ್ನು ಕತ್ತರಿಸಲು ಅನುಮತಿ ಕೋರಿ ಡಬ್ಲ್ಯುಆರ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
5ನೇ ಮತ್ತು 6ನೇ ಮಾರ್ಗಗಳ ನಿರ್ಮಾಣವು ಪ್ರಯಾಣಿಕರ ಹೆಚ್ಚುವರಿ ಸೇವೆಗಳ ಬೇಡಿಕೆಯನ್ನು ಪೂರೈಸುತ್ತದೆ. ಅಲ್ಲದೆ, ಹಾಲಿ ಇರುವ ಮಾರ್ಗಗಳಲ್ಲಿನ ದಟ್ಟಣೆಯನ್ನು ನಿವಾರಿಸುತ್ತದೆ ಹಾಗೂ ಪರಿಸರ ಪರಿಣಾಮಗಳನ್ನು ಸರಿದೂಗಿಸುತ್ತದೆ ಎಂಬ ಡಬ್ಲ್ಯುಆರ್‌ನ ವಾದವನ್ನು ಪೀಠವು ಪರಿಗಣಿಸಿತು.
ಪರಿಸರ ಹಾನಿಯನ್ನು ಸರಿದೂಗಿಸಲು 7,823 ಮ್ಯಾಂಗ್ರೋವ್ ಗಿಡಗಳನ್ನು ಮರು ನೆಡುವಂತೆಯೂ ರೈಲ್ವೆ ಅಧಿಕಾರಿಗಳಿಗೆ ಪೀಠವು ನಿರ್ದೇಶನ ನೀಡಿದೆ.
ಬೊರಿವಲಿ ಮತ್ತು ವಿರಾರ್ ರೈಲು ನಿಲ್ದಾಣಗಳ ನಡುವಿನ 5ನೇ ಮತ್ತು 6ನೇ ಮಾರ್ಗಗಳನ್ನು ಮುಂಬೈ ನಗರ ಸಾರಿಗೆ ಯೋಜನೆಯ (ಎಂಯುಟಿಪಿ) ಹಂತ III-ಎ ಅಡಿಯಲ್ಲಿ ₹2,184 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಪ್ರಸ್ತುತ ಮುಂಬೈ ಸೆಂಟ್ರಲ್ ಮತ್ತು ಬೊರಿವಲಿ ನಡುವೆ ಐದು ಮಾರ್ಗಗಳಿವೆ ಮತ್ತು ಆರನೆಯದು ನಿರ್ಮಾಣ ಹಂತದಲ್ಲಿದೆ. ಬೊರಿವಲಿಯಿಂದ ವಿರಾರ್‌ವರೆಗೆ ಸದ್ಯ ನಾಲ್ಕು ಮಾರ್ಗಗಳಿವೆ.