ಪಿಟಿಐ
ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಕೆಲ ನಾಯಕರು ಆಕ್ಷೇಪಾರ್ಹ ಮತ್ತು ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
‘ಆಕ್ಷೇಪಾರ್ಹ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹೀಗಾದಾಗ ಮಾತ್ರ ಭಾರತದ ರಾಜಕಾರಣವು ನೀತಿಗೆಡದಂತೆ ಮತ್ತು ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸಾಧ್ಯ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
‘ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ನೇರವಾಗಿ ಸಂಬಂಧಿಸಿ ವಿಷಯದ ಬಗ್ಗೆ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ನೀಡಿರುವ ಆಕ್ಷೇಪಾರ್ಹ, ಹಿಂಸಾತ್ಮಕ, ಅಸಭ್ಯ ಹೇಳಿಕೆಗಳ ಬಗ್ಗೆ ನಿಮಗೂ ತಿಳಿದಿರಬಹುದು. ಬಿಜೆಪಿ ಮತ್ತು ಮಿತ್ರಪಕ್ಷಗಳ ನಾಯಕರ, ಹಿಂಸೆಯನ್ನು ಪ್ರಚೋದಿಸುವ ಭಾಷೆಯು ಭವಿಷ್ಯಕ್ಕೆ ಹಾನಿಕರ ಎಂದು ವಿಷಾದದಿಂದ ಹೇಳಬೇಕಾಗಿದೆ. ಕೇಂದ್ರ ರೈಲ್ವೆ ಸಚಿವಾಲಯದ ರಾಜ್ಯ ಖಾತೆ ಸಚಿವ ಮತ್ತು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಸಚಿವರೊಬ್ಬರು ರಾಹುಲ್ ಗಾಂಧಿ ಅವರನ್ನು ‘ನಂಬರ್ ಒನ್ ಭಯೋತ್ಪಾದಕ’ ಎಂದು ಕರೆದಿರುವುದು ಆಘಾತ ಉಂಟುಮಾಡಿದೆ’ ಎಂದು ಹೇಳಿದ್ದಾರೆ.
‘ಮಹಾರಾಷ್ಟ್ರದಲ್ಲಿ ನಿಮ್ಮ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಕ್ಷದ ಶಾಸಕರೊಬ್ಬರು ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸಿ ತಂದವರಿಗೆ ₹11 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ದೆಹಲಿಯ ಬಿಜೆಪಿ ನಾಯಕರೊಬ್ಬರು ಇಂದಿರಾ ಗಾಂಧಿ ರೀತಿಯೇ ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾರೆ’ ಎಂದು ತಿಳಿಸಿದ್ದಾರೆ.
‘ಅಹಿಂಸೆ, ಸಾಮರಸ್ಯ ಮತ್ತು ಪ್ರೀತಿಯೇ ಭಾರತದ ಸಂಸ್ಕೃತಿ ಎಂದು ಹೆಸರುವಾಸಿಯಾಗಿದೆ. ನಮ್ಮ ಹೀರೊಗಳು ಇವುಗಳನ್ನೇ ರಾಜಕಾರಣದ ಮೌಲ್ಯವನ್ನಾಗಿಸಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ಸಂಸತ್ತಿನಲ್ಲಿ ಆಡಳಿತ ಮತ್ತು ವಿಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಗೌರವಯುತವಾಗಿ ಸ್ವೀಕರಿಸಿದ ಸುದೀರ್ಘ ಇತಿಹಾಸವೇ ಇದೆ. ಇದು ನಮ್ಮ ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸಿತ್ತು’ ಎಂದು ಪತ್ರದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.