ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಈಗಲೂ ಅಪಾಯಕಾರಿ: ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್‌

ಜಿ 20 ಆರೋಗ್ಯ ಸಚಿವರ ಸಭೆ * ಡಬ್ಲ್ಯುಎಚ್‌ಒ ಮುಖ್ಯಸ್ಥರ ಅಭಿಮತ
Published 18 ಆಗಸ್ಟ್ 2023, 13:46 IST
Last Updated 18 ಆಗಸ್ಟ್ 2023, 13:46 IST
ಅಕ್ಷರ ಗಾತ್ರ

ಗಾಂಧಿನಗರ: ‘ಕೋವಿಡ್–19 ಸದ್ಯ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸುವಷ್ಟು ಗಂಭೀರ ಅಲ್ಲವಾದರೂ, ಈಗಲೂ ಅದು ಆರೋಗ್ಯದ ದೃಷ್ಟಿಯಿಂದ ‘ಜಾಗತಿಕವಾಗಿ ಅಪಾಯಕಾರಿ’ಯೇ ಇದೆ’ ಎಂದು ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯುಎಚ್‌ಒ) ಪ್ರಧಾನ ನಿರ್ದೇಶಕ ಡಾ.ಟೆಡ್ರೊಸ್‌ ಘೆಬ್ರೆಯೆಸುಸ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಇಲ್ಲಿನ ಮಹಾತ್ಮ ಮಂದಿರ ಸಭಾಂಗಣದಲ್ಲಿ ನಡೆದ ಜಿ 20 ಶೃಂಗದ ಸದಸ್ಯ ರಾಷ್ಟ್ರಗಳ ಆರೋಗ್ಯ ಸಚಿವರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಡಬ್ಲ್ಯುಎಚ್‌ಒ ಈಚೆಗೆ ಕೊರೊನಾದ ಹೊಸ ತಳಿಯನ್ನು ವರ್ಗೀಕರಿಸಿದೆ. ಇದು ದೊಡ್ಡ ಪ್ರಮಾಣದಲ್ಲಿ ರೂಪಾಂತರ ಹೊಂದಬಹುದಾಗಿದೆ. ಬಿಎ.2.86 ರೂಪಾಂತರ ತಳಿಯನ್ನು ಸದ್ಯ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಎಲ್ಲ ರಾಷ್ಟ್ರಗಳು ಈ ವಿಷಯದಲ್ಲಿ ಕಟ್ಟೆಚ್ಚರ ವಹಿಸಬೇಕಾಗಿದೆ’ ಎಂದೂ ಹೇಳಿದರು.

‘ಸಾಂಕ್ರಾಮಿಕ ಸ್ಥಿತಿಯ ಸಂದರ್ಭದಲ್ಲಿ ಅನುಸರಿಸಬೇಕಾಗಿರುವ ಕ್ರಮಗಳನ್ನು ಎಲ್ಲ ರಾಷ್ಟ್ರಗಳು ಅಂತಿಮಗೊಳಿಸಬೇಕು. ಇದನ್ನು ಆಧರಿಸಿ ಮುಂದಿನ ವರ್ಷ ನಡೆಯಲಿರುವ ವಿಶ್ವ ಆರೋಗ್ಯ ಸಮ್ಮೇಳನದಲ್ಲಿ ನಿರ್ಣಯವನ್ನು ಕೈಗೊಳ್ಳಬಹುದಾಗಿದೆ’ ಎಂದು ಸಲಹೆ ಮಾಡಿದರು.

‘ದೇಹದ ಆರೋಗ್ಯವು ಹದಗೆಟ್ಟರೆ ಎಲ್ಲವೂ ಹದಗೆಡಲಿದೆ ಎಂಬ ಮುಖ್ಯವಾದ ಪಾಠವನ್ನು ಕೋವಿಡ್–19 ಪಿಡುಗು ನಮಗೆ ಕಲಿಸಿಕೊಟ್ಟಿದೆ. ಈ ಸಾಂಕ್ರಾಮಿಕದಿಂದ ಜಗತ್ತು ನೋವಿನ ಪಾಠಗಳನ್ನು ಕಲಿತಿದೆ’ ಎಂದು ಡಾ. ಘೆಬ್ರೆಯೆಸುಸ್ ಅಭಿಪ್ರಾಯಪಟ್ಟರು. 

ಸಾಂಕ್ರಾಮಿಕ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಕುರಿತ ಚರ್ಚೆ ಮತ್ತು ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳಿಗೆ ತಿದ್ದುಪಡಿ ಕುರಿತ ಪ್ರಕ್ರಿಯೆಗಳು ನಡೆದಿವೆ. ಕಾನೂನು ಮತ್ತು ನಿರ್ವಹಣಾ ಕಾರ್ಯಸೂಚಿ ರಚಿಸುವುದು, ಜಾಗತಿಕವಾಗಿ ಸಮಾನ ಆರೋಗ್ಯ ಭದ್ರತಾ ವ್ಯವಸ್ಥೆ ರೂಪಿಸುವುದು ಇದರಲ್ಲಿ ಸೇರಿದೆ ಎಂದು ಹೇಳಿದರು.

ಭಾರತಕ್ಕೆ ಶ್ಲಾಘನೆ: ಪ್ರಾಥಮಿಕ ಆರೋಗ್ಯಚಿಕಿತ್ಸಾ ಕೇಂದ್ರದ ಹಂತದಲ್ಲಿ ಟೆಲಿಮೆಡಿಸಿನ್‌ ವ್ಯವಸ್ಥೆ ಜಾರಿಗೊಳಿಸಿರುವ ಕ್ರಮಕ್ಕಾಗಿ ಡಬ್ಲ್ಯುಎಚ್‌ಒ ಮುಖ್ಯಸ್ಥರು ಭಾರತದ ಕ್ರಮವನ್ನು ಶ್ಲಾಘಿಸಿದರು. ವಿಶ್ವದಲ್ಲಿಯೇ ಅತಿದೊಡ್ಡ ಆರೋಗ್ಯವಿಮಾ ಯೋಜನೆಯಾದ ‘ಆಯುಷ್ಮಾನ್‌ ಭಾರತ್’ ರೂಪಿಸಿರುವುದಕ್ಕೂ ಅವರು ಭಾರತವನ್ನು ಅಭಿನಂದಿಸಿದರು.

ಡಿಜಿಟಲ್‌ ಆರೋಗ್ಯ ವ್ಯವಸ್ಥೆ ಅಭಿವೃದ್ಧಿಗೆ ಭಾರತ ಮತ್ತು ಎಲ್ಲ ಜಿ 20 ಸದಸ್ಯ ರಾಷ್ಟ್ರಗಳು ಕೈಜೋಡಿಸಿದ್ದು, ಔಪಚಾರಿಕವಾಗಿ ಇದಕ್ಕೆ ಶನಿವಾರ ಚಾಲನೆ ನೀಡಲಾಗುತ್ತದೆ ಎಂದರು. ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯಾ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT