ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್ ವರದಿ: ದೇವನಾಡಲ್ಲಿ ಬೀದಿಗೆ ಬಿದ್ದ ಬದುಕು, ಹೆಚ್ಚಿದ ಹೋಂ ಸ್ಟೇಗಳು

1975ರಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಬಿರುಕು
Last Updated 13 ಜನವರಿ 2023, 19:32 IST
ಅಕ್ಷರ ಗಾತ್ರ

ಜೋಶಿಮಠ (ಉತ್ತರಾಖಂಡ): ಹಿಮಾಲಯ ತಪ್ಪಲಿನ ದೇವನಾಡು ಜೋಶಿಮಠದ ಹಿರೀಕ ಪುರಾನ್‌ ಸಿಂಗ್‌ ಪದೇ ಪದೇ ಉದ್ವಿಗ್ನರಾಗುತ್ತಾರೆ. ಸಣ್ಣ ಸದ್ದಾದ ಕೂಡಲೇ ಮನೆಯೊಳಗೆ ಧಾವಿಸುತ್ತಾರೆ. ಮನೆಯ ಹತ್ತು ಕಡೆ ಆಗಿರುವ ಬಿರುಕುಗಳನ್ನು ಲೆಕ್ಕ ಹಾಕಿ ಸಮಾಧಾನದ ನಿಟ್ಟುಸಿರು ಬಿಡು‌ತ್ತಾರೆ. ಇನ್ನಷ್ಟು ಹಾನಿ ಆಗಿಲ್ಲವಲ್ಲ ಎಂಬುದು ಅವರ ಸಮಾಧಾನಕ್ಕೆ ಕಾರಣ.

ಜೋಶಿಮಠದ ಬಸ್‌ ನಿಲ್ದಾಣದ ಸಮೀಪದಲ್ಲೇ ದಶಕಗಳಷ್ಟು ಹಳೆಯದಾದ ಅವರ ಮನೆ ಇದೆ. ಅವರ ಮನೆಯನ್ನು ಅಸುರಕ್ಷಿತ ಪಟ್ಟಿಗೆ ಜಿಲ್ಲಾಡಳಿತ ಸೇರಿಸಿಲ್ಲ. ಹಾಗಾಗಿ, ಕುಟುಂಬದವರು ಕೊಂಚ ನೆಮ್ಮದಿ ಯಿಂದ ಇದ್ದಾರೆ. ಆದರೆ, ಕುಟುಂಬದ ಯಜಮಾನ ಪುರಾನ್ ಸಿಂಗ್‌ ಚಡ‍‍ಪಡಿಸುತ್ತಲೇ ಇರುತ್ತಾರೆ. ತನ್ನ ನೆಚ್ಚಿನ ಮನೆ ಬಿಟ್ಟು ಪುನರ್ವಸತಿ ಕೇಂದ್ರಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಿದ್ದರೆ ಸಾಕು ಎಂಬುದು ಅವರ ಪ್ರಾರ್ಥನೆ.

ಜೋಶಿಮಠ 12 ದಿನಗಳ ಅವಧಿಯಲ್ಲಿ 5.4 ಸೆಂ.ಮೀ.ನಷ್ಟು ಕುಸಿದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ರಾಷ್ಟ್ರೀಯ ದೂರಸಂವೇದಿ ಕೇಂದ್ರ ವರದಿ ನೀಡಿದ ಬಳಿಕ ಅವರ ಆತಂಕ ದುಪ್ಪಟ್ಟಾಗಿದೆ. ಅವರ ಮನೆಗೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಬಿಸಿಲೇರುತ್ತಿತ್ತು. ಮನೆಯ ಹೊರಗೆ ಬಿಸಿಲಿಗೆ ಮೈಯೊಡ್ಡಿದ್ದ 75ರ ಅಜ್ಜ ಬೇಸರದಿಂದಲೇ ಮಾತು ಆರಂಭಿಸಿದರು.

‘ನಮ್ಮ ಮನೆ ಸುರಕ್ಷಿತ ಎಂದು ಭಾವಿಸಿದ್ದೆವು. ಕಳೆದ ಕೆಲವು ದಿನಗಳಿಂದ ಆಗುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ತಲೆ ಬಿಸಿ ಜಾಸ್ತಿ ಆಗಿದೆ. ಭಯದಿಂದ ರಾತ್ರಿ ನಿದ್ದೆ ಬರುವುದಿಲ್ಲ. ಮನೆಯ ಬಿರುಕುಗಳನ್ನು ದಿಟ್ಟಿಸಿ ಕೂರುತ್ತೇನೆ. ಮುಂದೇನು ಮಾಡಬೇಕು ಎಂದು ತೋಚುತ್ತಿಲ್ಲ’ ಎಂದು ಅವರು ಹೇಳಿಕೊಂಡರು.

ಪಟ್ಟಣದ ಸಿಂಗ್‌ ಧಾರ್ ವಾರ್ಡ್‌ನ ನಿವಾಸಿ ಉಮೇಶ್ ರಾಣಾ ಅವರ ಮನೆಯಲ್ಲಿ ಎಂಟು ಮಂದಿ ಇದ್ದಾರೆ. ಅವರ ಮನೆಯ ಸೂರು ಹಾಗೂ ಗೋಡೆಯಲ್ಲಿ ಹಲವು ಕಡೆ ಬಿರುಕುಗಳು ಕಾಣಿಸಿಕೊಂಡಿವೆ. ‘ಇಲ್ಲಿನ ಪರಿಸರವೇ ಸೂಕ್ಷ್ಮವಾದುದು. ಇಲ್ಲಿ ಇಂತಹ ಅವಘಡ ಸಂಭವಿಸುತ್ತಿರುವುದು ಇದೇ ಮೊದಲು ಅಲ್ಲ. 1975ರಲ್ಲಿ ಇಲ್ಲಿನ ಕೆಲವು ಮನೆಗಳಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಂಡಿದ್ದವು. ನನಗೆ ಆಗ 15 ವರ್ಷ. ಇಲ್ಲಿ ನಿರ್ಮಾಣ ಚಟುವಟಿಕೆ ಕೂಡದು ಎಂದು ಎಂ.ಸಿ.ಮಿಶ್ರಾ ಸಮಿತಿ 1976ರಲ್ಲೇ ಶಿಫಾರಸು ಮಾಡಿತ್ತು. ಆಗ ಇಲ್ಲಿ 200–300 ಮನೆಗಳು ಇದ್ದವು. ಈಗ ಮನೆಗಳ ಸಂಖ್ಯೆ 4 ಸಾವಿರ ದಾಟಿದೆ. ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ನಾಯಿ ಕೊಡೆಗಳಂತೆ ಹೋಟೆಲ್, ಹೋಂ ಸ್ಟೇಗಳು ತಲೆ ಎತ್ತಿವೆ. ಈಗ ನಮಗೆ ಪ್ರಕೃತಿಯೇ ಬುದ್ದಿ ಕಲಿಸಲು ಹೊರಟಿದೆ. ಅದನ್ನು ಅನುಭವಿಸಬೇಕು ಅಷ್ಟೇ’ ಎಂದು ನುಡಿದರು.

‌ಅದೇ ವಾರ್ಡ್‌ನ ಮತ್ತೊಬ್ಬ ನಿವಾಸಿ ಜಗದೀಶ್‌ ನೇಗಿ, ‘ನನ್ನ ಮನೆಯಲ್ಲಿ ಜನವರಿ 2ರಂದು ಬಿರುಕು ಕಾಣಿಸಿಕೊಂಡಿತು. ಈಗ ಮತ್ತಷ್ಟು ಕಡೆ ಕಾಣಿಸಿಕೊಂಡು ಮನೆ ಕುಸಿಯುತ್ತಿದೆಯೋ ಎಂಬಂತೆ ಭಾಸವಾಗುತ್ತಿದೆ. ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಮನೆಯನ್ನು ಅಸುರಕ್ಷಿತ ಪಟ್ಟಿಗೆ ಸೇರಿಸಿಲ್ಲ. ಮನೆಯಲ್ಲಿ ವರ್ಷದ ಮಗುವಿದೆ. ಇಲ್ಲಿ ಹೇಗೆ ಇರುವುದು ಎಂಬುದೇ ತೋಚುತ್ತಿಲ್ಲ. ಬಾಂಬ್‌ ಮೇಲೆ ಕುಳಿತ ಅನುಭವವಾಗುತ್ತಿದೆ’ ಎಂದು ಹೇಳಿಕೊಂಡರು.

ಎರಡು ಮಹಡಿಯ ಮನೆಯಲ್ಲಿ ನೆಲೆಸಿರುವ ಪುಷ್ಪಾ ವರ್ಮಾ, ‘ನಮ್ಮದು ಆರು ಜನರ ಕುಟುಂಬ. ಪತಿ ಕೆಲವು ವರ್ಷಗಳ ಹಿಂದೆ ತೀರಿಕೊಂಡರು. ವಾರದ ಹಿಂದೆ ಮನೆ ಕೊಂಚ ವಾಲಿದ ಅನುಭವವಾಯಿತು. ಮರುದಿನವೇ ಇಬ್ಬರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಗನನ್ನು ಚಮೋಲಿಯ ಸಂಬಂಧಿಕರ ಮನೆಗೆ ಕಳುಹಿಸಿದೆ. ಅಧಿಕಾರಿಗಳು ಒಪ್ಪಿಗೆ ಕೊಟ್ಟರೆ ಪರಿಹಾರ ಕೇಂದ್ರಕ್ಕೆ ಹೋಗುತ್ತೇನೆ’ ಎಂದು ಹೇಳುತ್ತಾರೆ.

ಹಿಮ ಪ್ರವಾಸಿಗರ ಪ್ರವೇಶದ್ವಾರವಾಗಿರುವ ಜೋಶಿಮಠವು ಸಮುದ್ರ ಮಟ್ಟದಿಂದ 6,150 ಅಡಿ ಎತ್ತರದಲ್ಲಿದೆ. ಪ್ರತಿ ವರ್ಷವೂ ಪ್ರಕೃತಿಯ ಕೋಪಕ್ಕೆ ತುತ್ತಾಗುತ್ತಲೇ ಇರುತ್ತದೆ. ವಿಪರೀತ ಮಳೆ, ಪ್ರವಾಹ ಜೋಶಿಮಠಕ್ಕೆ ಹೊಸತಲ್ಲ. ಕಡಿದಾದ ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಈ ಪಟ್ಟಣದ ನೈಸರ್ಗಿಕ ಸೌಂದರ್ಯವೂ ಅಷ್ಟೇ ಅದ್ಭುತವಾದುದು. ಇದೀಗ, ಇಡೀ ಪಟ್ಟಣವೇ ಕುಸಿದು ಬೀಳುವ ಭೀತಿ ಎದುರಾಗಿದೆ. ಇಲ್ಲಿನ ಸುಮಾರು 20 ಸಾವಿರ ನಿವಾಸಿಗಳು ಭಯದಿಂದಲೇ ಇದ್ದಾರೆ. ಪವಿತ್ರ ಯಾತ್ರಾಸ್ಥಳ ಬದರೀನಾಥದ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಜೋಶಿಮಠ ನಾಮಾವಶೇಷಗೊಳ್ಳಲಿದೆ ಎಂಬುದು ಪ್ರವಾಸಿಗರ ಆತಂಕ.

ಹರಿದ್ವಾರ, ಋಷಿಕೇಶಕ್ಕೆ ಭೇಟಿ ಕೊಟ್ಟು ಜೋಶಿಮಠಕ್ಕೆ ಬಂದಿದ್ದ ಯಾತ್ರಾರ್ಥಿ ನೂತನ್‌ ಮಿಶ್ರಾ, ‘ಇಲ್ಲಿಗೆ ಇದು ಕೊನೆಯ ಪ್ರವಾಸ ಇರಬೇಕು. ಮುಂದಿನ ಸಲ ಇಲ್ಲಿಗೆ ಬರಲಿಕ್ಕೆ ಅವಕಾಶ ಸಿಗುತ್ತಾ ಇಲ್ಲವೇ ಗೊತ್ತಿಲ್ಲ. ಪ್ರಕೃತಿ ಇನ್ನಷ್ಟು ಮುನಿಯದಿದ್ದರೆ ಸಾಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT