ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರದಿಂದ 4 ದಿನ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಉಭಯ ದೇಶಗಳ ನಡುವಿನ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸುವ ನಿರೀಕ್ಷೆ ಇದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರೊಂದಿಗೆ ವಾಷಿಂಗ್ಟನ್‌ನಲ್ಲಿ ರಾಜನಾಥ್ ಅವರು ಮಾತುಕತೆ ನಡೆಸಲಿದ್ದಾರೆ.
ಈ ವೇಳೆ ಪ್ರಮುಖವಾಗಿ ‘31 ಎಮ್‌ಕ್ಯೂ–9ಬಿ ಡ್ರೋನ್‌ಗಳನ್ನು ಖರೀದಿಸುವ ಭಾರತದ ಯೋಜನೆ, ಜಂಟಿಯಾಗಿ ಯುದ್ಧ ವಾಹನಗಳನ್ನು ತಯಾರಿಸಲು ಉದ್ದೇಶಿಸಿರುವ ಯೋಜನೆ ಮತ್ತು ಭಾರತದಲ್ಲಿ ಜಿಇ ಎಫ್414 ಎಂಜಿನ್‌ಗಳ ತಯಾರಿಕೆ’ ಕುರಿತು ಮಾತುಕತೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಮೆರಿಕದ ರಕ್ಷಣಾ ಉದ್ಯಮದೊಂದಿಗೆ ನಡೆಯುತ್ತಿರುವ ಮತ್ತು ಭವಿಷ್ಯದ ರಕ್ಷಣಾ ಸಹಯೋಗಗಳ ಕುರಿತು ರಾಜನಾಥ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೊಂದಿಗೂ ಅವರು ಸಂವಾದ ನಡೆಸಲಿದ್ದಾರೆ.