ನವದೆಹಲಿ: ಅನಾರೋಗ್ಯಪೀಡಿತ ತಂದೆಯು ಗುಣಮುಖರಾಗಲೆಂದು ಪಶ್ಚಿಮ ದೆಹಲಿಯ ರೋಹಿಣಿ ಸ್ಮಶಾನದಲ್ಲಿ ನಿಗೂಢ ಆಚರಣೆಗಳನ್ನು ಮಾಡುತ್ತಿದ್ದ ಬಾಲಕಿಯ ಮೇಲೆ 52 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
‘ದೀರ್ಘಕಾಲದಿಂದಲೂ ಕಾಯಿಲೆಯಿಂದ ಬಳಲುತ್ತಿರುವ ತಂದೆಯ ಗುಣಮುಖಕ್ಕಾಗಿ ‘ತಂತ್ರ’ದ ಮೊರೆಹೋಗುವಂತೆ ಆರೋಪಿ ಮೊಹಮ್ಮದ್ ಷರೀಫ್ ಕಾಂಜಾವಾಲದಲ್ಲಿರುವ ಸ್ಮಶಾನಕ್ಕೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ’ ಎಂದು 12 ವರ್ಷದ ಸಂತ್ರಸ್ತ ಬಾಲಕಿ ದೂರು ನೀಡಿದ್ದಾಳೆ.
‘ಕಾಂಜವಾಲಾ ಪೊಲೀಸ್ ಠಾಣೆಗೆ ಮಂಗಳವಾರ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ದೂರು ಬಂದಿದೆ. ಸ್ಥಳಕ್ಕೆ ಪೊಲೀಸರ ತಂಡವನ್ನು ಕಳುಹಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಮೊಹಮ್ಮದ್ ಷರೀಫ್‌ನನ್ನು ಬಂಧಿಸಿದ್ದೇವೆ. ಬಾಲಕಿಯನ್ನು ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆದಿದೆ’ ಎಂದು ಹೇಳಿದ್ದಾರೆ.