ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರಿಗೆ ದೆಹಲಿಯ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.
‘₹25,000 ವೈಯಕ್ತಿಕ ಬಾಂಡ್ ಮತ್ತು ಕೆಲ ಷರತ್ತುಗಳನ್ನು ವಿಧಿಸಿ ಜಾಮೀನು ನೀಡುತ್ತಿರುವೆ’ ಎಂದು ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಅವರು ಹೇಳಿದರು. ನ್ಯಾಯಾಲಯದ ಅನುಮತಿ ಇಲ್ಲದೆ ದೇಶದಿಂದ ಹೊರಗೆ ಪ್ರಯಾಣಿಸುವಂತಿಲ್ಲ ಮತ್ತು ಸಾಕ್ಷ್ಯನಾಶಕ್ಕೆ ಪ್ರಯತ್ನಿಸುವಂತಿಲ್ಲ ಎಂದು ಅವರು ಷರತ್ತು ವಿಧಿಸಿದ್ದಾರೆ.
ಆದೇಶ ಹೊರಡಿಸುವ ಮೊದಲು ನ್ಯಾಯಾಧೀಶರು ಆರೋಪಿ ಬ್ರಿಜ್‌ಭೂಷಣ್ ಪರ ವಕೀಲರು, ದೂರುದಾರರ ಪರ ವಕೀಲರು ಮತ್ತು ದೆಹಲಿ ಪೊಲೀಸರ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಸರ್ಕಾರಿ ವಕೀಲರ ವಾದ ಆಲಿಸಿದರು.
ಜಾಮೀನು ಅರ್ಜಿಯನ್ನು ವಿರೋಧಿಸುತ್ತೀರಾ ಎಂದು ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರ್ಕಾರ ಪರ ವಕೀಲರು, ‘ಅರ್ಜಿಯನ್ನು ವಿರೋಧಿಸುವುದೂ ಇಲ್ಲ, ಬೆಂಬಲಿಸುವುದೂ ಇಲ್ಲ’ ಎಂದು ಉತ್ತರಿಸಿದರು.
ಇದನ್ನೂ ಓದಿ: ಮಣಿಪುರ ಹಿಂಸಾಚಾರ | ಬಿಜೆಪಿ ಎಂದರೆ 'ಬ್ರಿಜ್‌ಭೂಷಣ್ ಜನತಾ ಪಾರ್ಟಿ' ಎಂದ ಎಎಪಿ
ಜಾಮೀನು ಅರ್ಜಿಯನ್ನು ವಿರೋಧಿಸಿದ ದೂರುದಾರರ ಪರ ವಕೀಲರು, ಆರೋಪಿ ಪ್ರಭಾವಿ ವ್ಯಕ್ತಿ. ಹೀಗಾಗಿ ಜಾಮೀನು ನೀಡಬಾರದೆಂದು ಮನವಿ ಮಾಡಿದರು. ಬಳಿಕ, ಜಾಮೀನು ನೀಡಿದರೂ ಕಠಿಣ ಷರತ್ತುಗಳನ್ನು ವಿಧಿಸಬೇಕು ಎಂದರು.
ಆರೋಪಿ ಪರ ವಕೀಲರು ಮಾತನಾಡಿ, ‘ಆರೋಪಿ ಷರತ್ತುಗಳಿಗೆ ಬದ್ಧರಾಗಿರುತ್ತಾರೆ ಎಂದು ನಾನು ವಾಗ್ದಾನ ನೀಡುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.