ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಲೆಕ್ಕಾಚಾರ ವರ್ಗಾವಣೆ ಪ್ರಕರಣ ಸೋನಿಯಾ, ರಾಹುಲ್‌ ಇತರರ ಅರ್ಜಿ ವಜಾ

Published 26 ಮೇ 2023, 13:49 IST
Last Updated 26 ಮೇ 2023, 13:49 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ತೆರಿಗೆಯ ಸಾಮಾನ್ಯ ಲೆಕ್ಕಾಚಾರದ ಬದಲು, ಈ ಪ್ರಕ್ರಿಯೆಯನ್ನು ಕೇಂದ್ರ ವೃತ್ತಕ್ಕೆ ವರ್ಗಾಯಿಸಿದ್ದ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾ ಮಾಡಿತು.

ಶಸ್ತ್ರಾಸ್ತ್ರಗಳ ವಿತರಕ ಸಂಜಯ್‌ ಭಂಡಾರಿ ಅವರಿಗೆ ಸಂಬಂಧಿತ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದು, ಈ ಸಂಬಂಧ ತೆರಿಗೆಯ ಲೆಕ್ಕಾಚಾರವನ್ನು ಕೇಂದ್ರ ವೃತ್ತಕ್ಕೆ ವರ್ಗಾಯಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಇಂತಹುದೇ ಆಕ್ಷೇಪಗಳಿಗೆ ಸಂಬಂಧಿಸಿದಂತೆ ಸಂಜಯ್‌ ಗಾಂಧಿ ಸ್ಮಾರಕ ಟ್ರಸ್ಟ್‌, ಜವಾಹರ್ ಭವನ್ ಟ್ರಸ್ಟ್, ರಾಜೀವ್‌ಗಾಂಧಿ ಪ್ರತಿಷ್ಠಾನ, ರಾಜೀವ್‌ ಗಾಂಧಿ ಚಾರಿಟಬಲ್‌ ಟ್ರಸ್ಟ್, ಯಂಗ್ ಇಂಡಿಯನ್‌ ಮತ್ತು ಆಮ್‌ ಆದ್ಮಿ ಪಾರ್ಟಿ ಸಲ್ಲಿಸಿದ್ದ ಅರ್ಜಿಗಳನ್ನೂ ಕೋರ್ಟ್ ವಜಾ ಮಾಡಿತು.

2018–19ನೇ ಹಣಕಾಸು ವರ್ಷದ ಆದಾಯ ತೆರಿಗೆ ಲೆಕ್ಕಾಚಾರಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕೇಂದ್ರ ವೃತ್ತಕ್ಕೆ ವರ್ಗಾಯಿಸಿ ಇಲಾಖೆಯ ಪ್ರಧಾನ ಆಯುಕ್ತರು ಆದೇಶಿಸಿದ್ದರು. ತೆರಿಗೆ ವಂಚನೆ ಸಾಧ್ಯತೆ ಕುರಿತಂತೆ ಕೇಂದ್ರ ವೃತ್ತವು ಪರಿಶೀಲನೆ ನಡೆಸಲಿದ್ದು, ಪೂರಕವಾಗಿ ಇಲಾಖೆಯ ತನಿಖಾ ತಂಡದಿಂದಲೂ ಮಾಹಿತಿ ಪಡೆಯಲಿದೆ.

‘ನಿಸ್ಸಂದೇಹವಾಗಿ ಪರಸ್ಪರ ಸಂಬಂಧ ಅಥವಾ ಸಹಭಾಗಿತ್ವ ಇಲ್ಲದಿರಬಹುದು. ಆದರೆ, ಈ ಪ್ರಕರಣದಲ್ಲಿ ಲೆಕ್ಕಾಚಾರ ಪ್ರಕ್ರಿಯೆಯನ್ನು ತನಿಖೆಗೆ ಪೂರಕವಾಗಿ ವರ್ಗಾಯಿಸಲಾಗಿದೆ’ ಎಂದು ಅರ್ಜಿಯನ್ನು ವಜಾ ಮಾಡಿದ ನ್ಯಾಯಮೂರ್ತಿಗಳಾದ ಮನ್‌ಮೋಹನ್‌ ಮತ್ತು ದಿನೇಶ್‌ ಕುಮಾರ್ ಶರ್ಮಾ ಅವರಿದ್ದ ಪೀಠ ತಿಳಿಸಿತು.

ಅರ್ಜಿಯನ್ನು ವಜಾಗೊಳಿಸುವಾಗ ಪ್ರತಿವಾದಿಗಳ ನಡುವಿನ ವಿವಾದ ಅಥವಾ ಸ್ಥಾನಮಾನವನ್ನು ತಾನು ಪರಿಗಣಿಸಿಲ್ಲ ಎಂದೂ ಪೀಠ ಸ್ಪಷ್ಟಪಡಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT