ಕೋಲ್ಕತ್ತ: ಕಲ್ಲಿದ್ದಲು ಕಳ್ಳತನ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ), ಜೂನ್ 28ರಂದು ವಿಚಾರಣೆಗೆ ಹಾಜರಾಗುವಂತೆ ಪಶ್ಚಿಮ ಬಂಗಾಳ ಕಾನೂನು ಸಚಿವ ಮಲಯ್ ಘಟಕ್ ಅವರಿಗೆ ಶುಕ್ರವಾರ ಸಮನ್ಸ್ ನೀಡಿದೆ.
‘ಜೂನ್ 19ರಂದು ನವದೆಹಲಿಯಲ್ಲಿರುವ ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಈ ಮೊದಲು ಸೂಚಿಸಲಾಗಿತ್ತು. ಆದರೆ ಸಚಿವ ಘಟಕ್ ಹಾಜರಾಗಿರಲಿಲ್ಲ. ಈಗ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ’ ಎಂದು ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
‘ಈ ಹಗರಣದಲ್ಲಿ ಸಚಿವ ಘಟಕ್ ಶಾಮೀಲಾಗಿದ್ದರು ಎಂಬ ಬಗ್ಗೆ ನಮಗೆ ಸಾಕ್ಷ್ಯಗಳು ಲಭ್ಯವಾಗಿವೆ. ಆದರೆ, ನಿರ್ದಿಷ್ಟವಾಗಿ ಅವರ ಪಾತ್ರ ಏನಿತ್ತು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಆಧಿಕಾರಿ ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಕೋಲ್ಕತ್ತ ಮತ್ತು ಆಸನ್‌ಸೋಲ್‌ನಲ್ಲಿರುವ ಘಟಕ್ ಅವರ ನಿವಾಸಗಳಲ್ಲಿ ಇ.ಡಿ ಶೋಧ ನಡೆಸಿತ್ತು. ತನಿಖೆ ಆರಂಭಗೊಂಡ ನಂತರ ಅವರು ಈ ವರೆಗೆ ಎರಡು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.