ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಮಾಂಸ ತಿಂದಿದ್ದಾನೆಂಬ ಶಂಕೆ: ಚಂಡೀಗಢದಲ್ಲಿ ಕಾರ್ಮಿಕನನ್ನು ಥಳಿಸಿ ಹತ್ಯೆ

ಐವರು ಆರೋಪಿಗಳ ಬಂಧನ
Published 31 ಆಗಸ್ಟ್ 2024, 15:46 IST
Last Updated 31 ಆಗಸ್ಟ್ 2024, 15:46 IST
ಅಕ್ಷರ ಗಾತ್ರ

ಚಂಡೀಗಢ: ಗೋಮಾಂಸ ತಿಂದ ಶಂಕೆಯ ಮೇಲೆ ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕನನ್ನು ಥಳಿಸಿ ಕೊಂದಿರುವ ಘಟನೆ ಹರಿಯಾಣದ ಚಂಡೀಗಢದ ಚರಖಿ ದಾದರಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದ ಸಂಬಂಧ ಐವರು ‘ಗೋರಕ್ಷಕ’ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು. 

ಕಾರ್ಮಿಕ ಸಬೀರ್‌ ಮಲಿಕ್ ಅವರನ್ನು  ಆಗಸ್ಟ್‌ 27ರಂದು ಥಳಿಸಿ ಕೊಲ್ಲಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಮಲಿಕ್‌ ಅವರು ಗೋಮಾಂಸ ತಿಂದಿದ್ದಾರೆ ಎಂದು ಶಂಕಿಸಿ ಆರೋಪಿಗಳಾದ ಅಭಿಷೇಕ್, ಮೋಹಿತ್‌, ರವೀಂದರ್‌, ಕಮಲ್‌ಜಿತ್‌, ಸಾಹಿಲ್‌ ಅಂಗಡಿಯೊಂದರ ಬಳಿಗೆ ಮಲಿಕ್‌ ಅವರನ್ನು ಕರೆಸಿ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಮಧ್ಯಪ್ರವೇಶಿಸಿ ಹೊಡೆಯುವುದನ್ನು ತಪ್ಪಿಸಿದ್ದರು. ಬಳಿಕ ಆರೋಪಿಗಳು ಮಲಿಕ್ ಅವರನ್ನು ಮತ್ತೊಂದು ಜಾಗಕ್ಕೆ ಕರೆದೊಯ್ದು ಮತ್ತೆ ಹೊಡೆದು ಕೊಂದಿದ್ದಾರೆ’ ಎಂದು ತಿಳಿಸಿದರು.

ಮಲಿಕ್‌, ಬಾಂಧ್ರಾ ಗ್ರಾಮದಲ್ಲಿ ಗುಡಿಸಲಿನಲ್ಲಿ ವಾಸವಿದ್ದರು. ಚಿಂದಿ ಆಯ್ದು ಅದರಿಂದ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು ಹೇಳಿದರು.

‘ಐವರೂ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಗೋಮಾಂಸ ಸಾಗಣೆ ಶಂಕೆ: ಸಹ ಪ್ರಯಾಣಿಕರಿಂದ ಹಲ್ಲೆ

ಮುಂಬೈ: ಗೋಮಾಂಸವನ್ನು ಕೊಂಡೊಯ್ಯುತ್ತಿದ್ದ ಶಂಕೆಯ ಮೇಲೆ ವಯೋವೃದ್ಧರೊಬ್ಬರ ಮೇಲೆ  ರೈಲಿನ ಸಹಪ್ರಯಾಣಿಕರು ಹಲ್ಲೆ ನಡೆಸಿರುವ ಘಟನೆ  ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್‌ಪುರಿ ಸಮೀಪ ನಡೆದಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ)  ತಿಳಿಸಿದರು.

ಒಂದು ವಾರದ ಹಿಂದೆ ಘಟನೆ ನಡೆದಿದ್ದು ಈ ಕುರಿತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ಹೇಳಿದರು.

ಹಲವರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದಿಸಿರುವ ದೃಶ್ಯ ವಿಡಿಯೊದಲ್ಲಿ ಇದೆ. ಜಿಆರ್‌ಪಿ ಪ್ರಕಾರ ಸಂತ್ರಸ್ತ ಹಾಜಿ ಅಶ್ರಫ್‌ ಮುನ್ಯಾರ್‌ ಅವರು ಜಲಗಾಂವ್‌ ನಿವಾಸಿ.  ಹಲ್ಲೆ ನಡೆದ ದಿನ ಅವರು ಕಲ್ಯಾಣ್‌ನಲ್ಲಿರುವ ಪುತ್ರಿಯ ನಿವಾಸಕ್ಕೆ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತೆರಳುತ್ತಿದ್ದರು.

‘ವಿಡಿಯೊವನ್ನು ಪರಿಶೀಲಿಸಿ ಸಂತ್ರಸ್ತ ವೃದ್ಧ ಮತ್ತು ದಾಳಿ ನಡೆಸಿದ ಜನರನ್ನು ಗುರುತಿಸಿ ತನಿಖೆ ನಡೆಸಲಾಗುತ್ತಿದೆ. ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT