ನವದೆಹಲಿ/ ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಹಾಗೂ ಅವರ ಪುತ್ರ, ಸಂಸದ ಗೌತಮ್ ಸಿಗಮಣಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಮತ್ತು ಡಿಎಂಕೆ ಈ ದಾಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಯ ಬೆನ್ನಲ್ಲೇ ತಮಿಳುನಾಡಿನಲ್ಲಿ ಡಿಎಂಕೆ–ಕಾಂಗ್ರೆಸ್ ಮೈತ್ರಿಯನ್ನು ಗುರಿಯಾಗಿಸಿಕೊಂಡು ಪ್ರಧಾನಿ ಮೋದಿ ಸರ್ಕಾರವು ಈ ಪ್ರತೀಕಾರಕ್ಕೆ ಇಳಿದಿದೆ ಎಂದು ಆಪಾದಿಸಿವೆ.
ಅಪ್ಪ ಮತ್ತು ಪುತ್ರನಿಗೆ ಸೇರಿದ ಚೆನ್ನೈ, ವೆಲ್ಲುಪುರಂನಲ್ಲಿರುವ ಮನೆ, ಇತರೇ ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಕಳೆದ ತಿಂಗಳು ಉದ್ಯೋಗಕ್ಕಾಗಿ ಹಣ ಪಡೆದ ಆರೋಪದ ಮೇಲೆ ಸಚಿವ ಸೆಂಥಿಲ್ ಬಾಲಾಜಿ ಮೇಲೆ ಇ.ಡಿ ದಾಳಿ ನಡೆದಿತ್ತು. ಸ್ಟಾಲಿನ್ ಸರ್ಕಾರದ ಮತ್ತೊಬ್ಬ ಸಚಿವರ ಮೇಲೆ ನಡೆದಿರುವ ಎರಡನೇ ದಾಳಿ ಇದಾಗಿದೆ.
ಪೊನ್ಮುಡಿ ಅವರು ತಿರುಕ್ಕೊಯಿಲೂರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರೆ, ಸಿಗಮಣಿ ಅವರು ಕಲ್ಲಕುರಿಚಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ಪ್ರಕರಣದ ಹಿನ್ನೆಲೆ ಏನು?
2007ರಿಂದ 2011ರ ಅವಧಿಯಲ್ಲಿ ಪೊನ್ಮುಡಿ ಅವರು ಗಣಿಗಾರಿಕೆ ಸಚಿವರಾಗಿದ್ದರು. ಈ ವೇಳೆ ನಿಯಮಾವಳಿಗಳನ್ನು ಉಲ್ಲಂಘಿಸಿ ಪುತ್ರ ಸೇರಿದಂತೆ ಕುಟುಂಬದ ಸದಸ್ಯರಿಗೆ ಗಣಿ ಮತ್ತು ಕ್ವಾರಿ ನಡೆಸಲು ಪರವಾನಗಿ ನೀಡಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹ 28 ಕೋಟಿ ನಷ್ಟವಾಗಿತ್ತು. ಅಲ್ಲದೇ, ನಿರ್ದಿಷ್ಟ ಪ್ರದೇಶವನ್ನೂ ಮೀರಿ ಗಣಿಗಾರಿಕೆ ನಡೆಸಿದ ಆರೋಪವೂ ಇವರ ಮೇಲಿದೆ.
ಈ ಸಂಬಂಧ ದೂರು ದಾಖಲಿಸಿದ್ದ ಪೊಲೀಸರು ತನಿಖೆ ಪೂರ್ಣಗೊಳಿಸಿ ಸಚಿವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಇದೇ ಪ್ರಕರಣದಲ್ಲಿ ವಿಚಾರಣೆಗೆ ತಡೆ ಕೋರಿ ಸಿಗಮಣಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತ್ತು.
ಅರ್ಜಿದಾರರು ಅಕ್ರಮವಾಗಿ ಗಣಿಗಾರಿಕೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ, ವಿಚಾರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಚುನಾವಣಾ ಪ್ರಚಾರಕ್ಕಿಳಿದ ಇ.ಡಿ: ಸ್ಟಾಲಿನ್
ತನ್ನ ಸಂಪುಟದ ಸಹೋದ್ಯೋಗಿ ಮೇಲಿನ ದಾಳಿಗೆ ಕೆಂಡಾಮಂಡಲವಾಗಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ‘ಇ.ಡಿ ಚುನಾವಣಾ ಪ್ರಚಾರಕ್ಕೆ ಇಳಿದಿದೆ. ಇಂದಿನ ದಾಳಿಯು ಪ್ರಚಾರದ ಅಣಕು ಪ್ರದರ್ಶನವಾಗಿದೆ’ ಎಂದು ಟೀಕಿಸಿದ್ದಾರೆ.
‘ಈಗಾಗಲೇ, ರಾಜ್ಯಪಾಲ ಆರ್.ಎನ್. ರವಿ ಅವರು ಡಿಎಂಕೆ ಪರ ಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೆ ಈಗ ಇ.ಡಿ ಕೂಡ ಕೈಜೋಡಿಸಿದೆ. ಹಾಗಾಗಿ, ಚುನಾವಣಾ ಕೆಲಸ ನಮಗೆ ಹಗುರಗೊಂಡಿದೆ’ ಎಂದು ವ್ಯಂಗ್ಯವಾಡಿದ್ದಾರೆ.
‘ದಾಳಿಯಿಂದ ಪಕ್ಷಕ್ಕೆ ಸಣ್ಣ ಭಯವೂ ಇಲ್ಲ. ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಇ.ಡಿಯಿಂದ ಇಂತಹ ನಾಟಕಗಳು ನಡೆಯುವುದು ಸರ್ವೇಸಾಮಾನ್ಯ’ ಎಂದಿದ್ದಾರೆ.
‘ಈ ದಾಳಿ ಎದುರಿಸಲು ಪಕ್ಷ ಸಮರ್ಥವಾಗಿದೆ. ಗುಟ್ಕಾ ಹಗರಣದಲ್ಲಿ ಎಐಎಡಿಎಂಕೆ ನಾಯಕರು ಭಾಗಿಯಾದ ಆರೋಪವಿದೆ. ಆದರೆ, ಕೇಂದ್ರದ ತನಿಖಾ ಏಜೆನ್ಸಿಗಳು ಅವರ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ’ ಎಂದು ಡಿಎಂಕೆ ವಕ್ತಾರ ಎ. ಸರವಣನ್ ಟೀಕಿಸಿದ್ದಾರೆ.
ಸಿಪಿಎಂ ಮತ್ತು ಸಿಪಿಐ ಕೂಡ ಈ ದಾಳಿಯನ್ನು ಖಂಡಿಸಿದ್ದು, ‘ರಾಜಕೀಯ ಲಾಭಕ್ಕಾಗಿ ಬಿಜೆಪಿಯು ಇಂತಹ ಕೀಳುಮಟ್ಟಕ್ಕೆ ಇಳಿದಿದೆ’ ಎಂದು ಆಪಾದಿಸಿವೆ.
ಪಕ್ಷಗಳನ್ನು ಒಡೆಯಲು ಹಾಗೂ ಭಯ ಹುಟ್ಟಿಸಲು ಕೇಂದ್ರವು ಇ.ಡಿಯನ್ನು ಅಸ್ತ್ರವಾಗಿ ಬಳಸುತ್ತಿದೆ. ಇದರಿಂದ ಇಡೀ ರಾಷ್ಟ್ರವನ್ನು ನಿಯಂತ್ರಿಸಲು ಸಾಧ್ಯವಿಲ್ಲ.ಅರವಿಂದ ಕೇಜ್ರಿವಾಲ್, ಮುಖ್ಯಮಂತ್ರಿ, ದೆಹಲಿ
ಪ್ರತಿಪಕ್ಷಗಳು ಒಗ್ಗೂಡುವುದನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸಹಿಸಲು ಆಗುತ್ತಿಲ್ಲ. ಹಾಗಾಗಿ, ಇ.ಡಿ ದಾಳಿಯ ಮೂಲಕ ಸೇಡಿನ ರಾಜಕೀಯ ನಡೆಸುತ್ತಿದೆ.ಮಲ್ಲಿಕಾರ್ಜುನ ಖರ್ಗೆ, ಅಧ್ಯಕ್ಷ, ಎಐಸಿಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.