ಹಿಸ್ಸಾರ್(ಹರಿಯಾಣ): ‘ಕಾಂಗ್ರೆಸ್‌ನಿಂದ ಸ್ಥಿರತೆ ಸಾಧ್ಯವಿಲ್ಲ. ಆ ಪಕ್ಷದಲ್ಲಿನ ಆಂತರಿಕ ಕಚ್ಚಾಟವೇ ಇದಕ್ಕೆ ಕಾರಣ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
‘ಹರಿಯಾಣ ಮುಖ್ಯಮಂತ್ರಿಯಾಗಲು ಆ ಪಕ್ಷದ ನಾಯಕರಲ್ಲಿ ಪೈಪೋಟಿ ಶುರುವಾಗಿದೆ. ‘ಬಾಪು’(ಭೂಪಿಂದರ್ ಸಿಂಗ್ ಹೂಡಾ), ‘ಬೇಟಾ’(ದೀಪೇಂದರ್ ಹೂಡಾ) ಕೂಡ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿಗಿಳಿದಿದ್ದಾರೆ’ ಎಂದು ಕುಟುಕಿದರು.
ಇಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಹರಿಯಾಣದಲ್ಲಿ ಅಭಿವೃದ್ಧಿ ಕಾರ್ಯಗಳು ಮುಂದುವರಿಯಬೇಕು ಎಂದು ಬಯಸಿರುವ ಜನರು, ಬಿಜೆಪಿಗೆ ಮೂರನೇ ಬಾರಿ ಅವಕಾಶ ನೀಡುವುದಕ್ಕೆ ತೀರ್ಮಾನಿಸಿದ್ದಾರೆ’ ಎಂದರು.
‘ಮಧ್ಯಪ್ರದೇಶ, ರಾಜಸ್ಥಾನ ವಿಧಾನಸಭೆಗಳ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಸುಳ್ಳುಗಳ ಆಧಾರದಲ್ಲಿ ಮತ ಕೇಳಿತು. ಆದರೆ, ಸುಳ್ಳುಗಳ ಬಲೂನ್ ಒಡೆದು ಹೋಯಿತು. ಹರಿಯಾಣದಲ್ಲಿಯೂ ಕಾಂಗ್ರೆಸ್ ನೆಲಕಚ್ಚಲಿದೆ. ಸ್ವತಃ ಕಾಂಗ್ರೆಸ್ ನಾಯಕರೇ ಈ ಮಾತು ಹೇಳಲು ಆರಂಭಿಸಿದ್ದಾರೆ’ ಎಂದು ಮೋದಿ ಹೇಳಿದರು.