ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಸ್‌ವೊಂದು ಬಡಗಾಮ್ ಜಿಲ್ಲೆಯಲ್ಲಿ ಶುಕ್ರವಾರ ಕಮರಿಗೆ ಉರುಳಿದ್ದು, ದುರಂತದಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಕನಿಷ್ಠ ನಾಲ್ವರು ಯೋಧರು ಮೃತಪಟ್ಟಿದ್ದಾರೆ.
ಬಸ್‌ನಲ್ಲಿ ಬಿಎಸ್‌ಎಫ್‌ನ 35 ಸಿಬ್ಬಂದಿ ಇದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು, ಆಡಳಿತಾಧಿಕಾರಿಗಳು ಮತ್ತು ಸ್ಥಳೀಯ ಕಾರ್ಯಕರ್ತರು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಸುಮಾರು 30 ಗಾಯಾಳುಗಳನ್ನು ಬಡಗಾಮ್ ಹಾಗೂ ಶ್ರೀನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಜಮ್ಮು ಪ್ರಾಂತ್ಯದ ರಾಜೌರಿ ಜಿಲ್ಲೆಯಲ್ಲಿ ಸೇನಾ ವಾಹನ ಕಣಿವೆಗೆ ಉರುಳಿ ನಾಲ್ವರು ಯೋಧರು ಮೃತಪಟ್ಟ ಪ್ರಕರಣ ಮೂರು ದಿನಗಳ ಹಿಂದಷ್ಟೇ ವರದಿಯಾಗಿತ್ತು.
ಚುನಾವಣೆ
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಸೆಪ್ಟೆಂಬರ್ 18ರಂದು ಮೊದಲ ಹಂತದದಲ್ಲಿ 24 ಕ್ಷೇತ್ರಗಳಿಗೆ ಮತದಾನವಾಗಿದೆ. ಸೆಪ್ಟೆಂಬರ್ 25ರಂದು ಎರಡನೇ ಹಂತದಲ್ಲಿ 26 ಕ್ಷೇತ್ರಗಳಿಗೆ ಮತ್ತು ಅಕ್ಟೋಬರ್ 1ರಂದು ಮೂರನೇ ಹಂತದದಲ್ಲಿ 40 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.