ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್‌ಆರ್‌ಐ ಕೋಟಾ | ವಂಚನೆ ನಿಲ್ಲಬೇಕು: ಸುಪ್ರೀಂ ಕೋರ್ಟ್

Published : 24 ಸೆಪ್ಟೆಂಬರ್ 2024, 14:50 IST
Last Updated : 24 ಸೆಪ್ಟೆಂಬರ್ 2024, 14:50 IST
ಫಾಲೋ ಮಾಡಿ
Comments

ನವದೆಹಲಿ: ‘ಎನ್‌ಆರ್‌ಐ ಕೋಟಾ’ದಡಿ ರಾಜ್ಯದಲ್ಲಿ ಎಂಬಿಬಿಎಸ್‌ ಹಾಗೂ ದಂತ ವೈದ್ಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿ ಹೈಕೋರ್ಟ್‌  ತೀರ್ಪು ಪ್ರಶ್ನಿಸಿ ಪಂಜಾಬ್‌ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್‌. ‘ಈ ವಂಚನೆ ನಿಲ್ಲಬೇಕು’ ಎಂದು ಮಂಗಳವಾರ ಹೇಳಿದೆ.

ಎನ್‌ಆರ್‌ಐ ಕೋಟಾ ವ್ಯಾಪ್ತಿಯನ್ನು ಹಿಗ್ಗಿಸಿ, ವೈದ್ಯ ಮತ್ತು ದಂತ ವೈದ್ಯ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿ ಪಂಜಾಬ್‌ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ರದ್ದುಗೊಳಿಸಿ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಸೆ.10ರಂದು ತೀರ್ಪು ನೀಡಿತ್ತು.

ಇದನ್ನು ಪ್ರಶ್ನಿಸಿ ಪಂಜಾಬ್‌ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ, ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರಿದ್ದ ಪೀಠವು ‘ಹೈಕೋರ್ಟ್‌ ತೀರ್ಪು ನಿಸ್ಸಂಶಯವಾಗಿ ಸರಿಯಾಗಿದೆ’ ಎಂದಿದೆ.

‘ಪಂಜಾಬ್‌ ಸರ್ಕಾರದ ಮೇಲ್ಮನವಿಯಲ್ಲಿ ಯಾವುದೇ ಸಕಾರಣಗಳು ಮತ್ತು ತಿರುಳು ಇಲ್ಲ’ ಎಂದು ಹೇಳಿದೆ.

‘ಪಂಜಾಬ್‌ ಸರ್ಕಾರದ ನಿರ್ಧಾರದಿಂದಾಗುವ ಅಪಾಯಕಾರಿ ಪರಿಣಾಮಗಳನ್ನು ಗಮನಿಸಬೇಕು. ‘ಎನ್‌ಆರ್‌ಐ ಕೋಟಾ’ದಡಿ ಬರುವ ಅಭ್ಯರ್ಥಿಗಿಂತ ಮೂರು ಪಟ್ಟು ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗೆ ಪ್ರವೇಶ ಸಿಗುವುದಿಲ್ಲ. ಇದು, ಹಣ ಗಳಿಸುವ ಮಾರ್ಗವಷ್ಟೆ.  ಇಂತಹ ವಂಚನೆ ಕೊನೆಗೊಳ್ಳಬೇಕು’ ಎಂದೂ ಪೀಠ ಹೇಳಿದೆ.

ರಾಜ್ಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಸಂಬಂಧಿಸಿ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಶೇ 15ರಷ್ಟು ಮೀಸಲಾತಿ ಇದೆ. ಎನ್‌ಆರ್‌ಐಗಳ ಸೋದರ ಸಂಬಂಧಿಗಳು, ಮೊಮ್ಮಕ್ಕಳು ಸೇರಿದಂತೆ ದೂರದ ಸಂಬಂಧಿಗಳನ್ನು ಕೂಡ ಅನಿವಾಸಿ ಭಾರತೀಯರು ಎಂಬುದಾಗಿ ಪರಿಗಣಿಸಿ, ಅವರಿಗೂ ಈ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಆಗಸ್ಟ್‌ 20ರಂದು ಪಂಜಾಬ್‌ ಸರ್ಕಾರ ಆದೇಶ ಹೊರಡಿಸಿತ್ತು.

ಪ್ರತಿಭಾವಂತ ಅಭ್ಯರ್ಥಿಗಳ ಬದಲು ವಿದೇಶಗಳಲ್ಲಿ ನೆಲೆನಿಂತ ಅನಿವಾಸಿ ಭಾರತೀಯರ ದೂರದ ಸಂಬಂಧಿಗಳು ‘ಎನ್‌ಆರ್‌ಐ ಕೋಟಾ’ದಡಿ ಪ್ರವೇಶ ಪಡೆಯುವುದಕ್ಕೆ ಅನುಮತಿ ನೀಡಲಾಗದು
ಸುಪ್ರೀಂ ಕೋರ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT