ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

G-20 Summit: ವಿಶ್ವ ನಾಯಕರಿಗೆ ಚಿನ್ನ, ಬೆಳ್ಳಿ ಲೇಪಿತ ಕಟ್ಲರಿಯಲ್ಲಿ ಆಹಾರ

Published 7 ಸೆಪ್ಟೆಂಬರ್ 2023, 16:32 IST
Last Updated 7 ಸೆಪ್ಟೆಂಬರ್ 2023, 16:32 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ದೇಶ ಮತ್ತು ವಿದೇಶಗಳ ನಾಯಕರಿಗೆ ಆತಿಥ್ಯದ ವೇಳೆ ಚಿನ್ನ, ಬೆಳ್ಳಿ ಲೇಪಿತ ಪಾತ್ರೆ, ಚಮಚಗಳಲ್ಲಿ (ಟೇಬಲ್‌ವೇರ್) ಊಟ, ಉಪಾಹಾರ ಬಡಿಸಲಾಗುತ್ತಿದೆ. ವಿಶ್ವ ನಾಯಕರಿಗೆ ಆಹಾರ–ಖಾದ್ಯಗಳನ್ನು ಉಣಬಡಿಸಲು ಭಾರತದ ಸಾಂಸ್ಕೃತಿಕ ಪರಂಪರೆಯ ಕುಸುರಿ ಕೆತ್ತನೆಯ ವಿನ್ಯಾಸಗಳ, ಚಿನ್ನ ಮತ್ತು ಬೆಳ್ಳಿ ಲೇಪಿತ ಪಾತ್ರೆಗಳು (ಕಟ್ಲರಿ) ಕಾಯುತ್ತಿವೆ.

‌ಹೆಚ್ಚಿನ ಕಟ್ಲರಿಗಳು ಸ್ಟೀಲ್ ಅಥವಾ ಹಿತ್ತಾಳೆಯ ಅಥವಾ ಎರಡರ ಮಿಶ್ರಣದ ತಳ ಹೊಂದಿದ್ದರೂ, ಪ್ರತಿನಿಧಿಗಳಿಗೆ ಆಹಾರ ಬಡಿಸಲು ಬಳಸುವ ಕಟ್ಲರಿಗಳು ಬೆಳ್ಳಿಯ ಸೊಗಸಾದ ಲೇಪನ ಹೊಂದಿರಲಿವೆ. ಚಿನ್ನದ ಲೇಪನ ಹೊಂದಿರುವ ಗ್ಲಾಸ್‌ಗಳನ್ನು ಸ್ವಾಗತ ಪಾನೀಯ ಕೊಡಲು ಬಳಸಲಾಗುತ್ತಿದೆ ಎಂದು ಜಿ20 ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿಯ ವಿವಿಧ ಐಷಾರಾಮಿ ಹೋಟೆಲ್‌ಗಳು ಈಗಾಗಲೇ ಚಿನ್ನ ಮತ್ತು ಬೆಳ್ಳಿ ಲೇಪಿತ ಕಟ್ಲರಿಗಳನ್ನು ಖರೀದಿಸಿವೆ. ಇವುಗಳನ್ನು ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳ ಆತಿಥ್ಯಕ್ಕೆ ಬಳಸಲಾಗುತ್ತದೆ ಎಂದು ಅವರು ಹೇಳಿದರು.

ಸೂಕ್ಷ್ಮ ಕೆತ್ತನೆಯ ಅಲಂಕೃತವಾದ 15,000 ಬೆಳ್ಳಿ ಲೇಪಿತ ಪಾತ್ರೆ ಸಾಮಾನುಗಳನ್ನು 200ಕ್ಕೂ ಹೆಚ್ಚು ಕುಶಲಕರ್ಮಿಗಳು ಸುಮಾರು 50 ಸಾವಿರ ಮಾನವ ಗಂಟೆಗಳಲ್ಲಿ ತಯಾರಿಸಿದ್ದಾರೆ ಎಂದು ಜೈಪುರ ಮೂಲದ, ಹೋಟೆಲ್‌ಗಳಿಗೆ ಲೋಹ-ಸಾಮಾನುಗಳನ್ನು ಪೂರೈಸುವ ಸಂಸ್ಥೆ ಐರಿಸ್ ಜೈಪುರ ಹೇಳಿದೆ. 

‘ನಮ್ಮ ಶ್ರೀಮಂತ ಪಾಕಶಾಲೆಯ ಪರಂಪರೆಯೊಂದಿಗೆ ವಿಶ್ವ ನಾಯಕರನ್ನು ಆಕರ್ಷಿಸಲು, ಪ್ರತಿ ಟೇಬಲ್‌ವೇರ್ ಮತ್ತು ಅಲಂಕಾರಗಳು ಭಾರತದ ಸಂಸ್ಕೃತಿ, ಕಲೆ ಮತ್ತು ಆತಿಥ್ಯವನ್ನು ಪ್ರತಿಬಿಂಬಿಸಲಾಗುತ್ತದೆ’ ಎಂದು ಐರಿಸ್‌ ಇಂಡಿಯಾ ಸಿಇಒ ರಾಜೀವ್ ಪಬುವಾಲ್ ಹೇಳಿದ್ದಾರೆ.

ಇದೇ 9ರಿಂದ 10ರವರೆಗೆ ನಡೆಯಲಿರುವ ಶೃಂಗಸಭೆಯ ಅದ್ಧೂರಿ ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಲು ನವದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪವು ಸಂಪೂರ್ಣ ಸಜ್ಜುಗೊಂಡಿದೆ. ಮುಖ್ಯ ಕಾರ್ಯಕ್ರಮದ ಸ್ಥಳದಲ್ಲಿ ಪ್ರಾದೇಶಿಕ ತಿನಿಸು, ಬೀದಿ ಬದಿಯ ಆಹಾರ ಮತ್ತು ಸಿರಿಧಾನ್ಯಗಳ ಪ್ರದರ್ಶನವೂ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿರಿಧಾನ್ಯಗಳ ತರಹೇವಾರಿ ಖಾದ್ಯ:

ವಿದೇಶಿ ಅತಿಥಿಗಳಿಗೆ ಭಾರತದ ಆಹಾರ ರುಚಿ ಪರಿಚಯಿಸಲು ಹೋಟೆಲ್‌ಗಳು ತಮ್ಮದ ಆದ ಕೆಲವು ವಿಶೇಷ ಮೆನುಗಳನ್ನು ಸಿದ್ಧಪಡಿಸುತ್ತಿವೆ. ವಿಶ್ವದ ನಾಯಕರು ತಂಗಲಿರುವ ಹೋಟೆಲ್‌ಗಳಲ್ಲಿ ಸಿರಿಧಾನ್ಯ ಆಧಾರಿತ ಮೆನು ಸಿದ್ಧಪಡಿಸಲಾಗುತ್ತಿದೆ. 

ಪ್ರತಿನಿಧಿಗಳು ಶೃಂಗಸಭೆಯ ಸ್ಥಳ ಭಾರತ್ ಮಂಟಪದಲ್ಲಿ ಭೋಜನ ಮಾಡುವ ಸಾಧ್ಯತೆ ಇದೆ. ಆದರೂ ಅವರು ವಾಸ್ತವ್ಯ ಮಾಡಲಿರುವ ಹೋಟೆಲ್‌ಗಳಲ್ಲಿ ಅತಿಥಿಗಳ ವೇಳಾಪಟ್ಟಿಗೆ ಅನುಗುಣವಾಗಿ ವಿಶೇಷ ಮೆನು ಸಹ ಇರಲಿದೆ. ಹೋಟೆಲ್‌ಗಳು ಸಿರಿಧಾನ್ಯಗಳ ಆಹಾರದ ಜತೆಗೆ, ರಾಗಿ ಇಡ್ಲಿ, ದೋಸೆ, ಸಿರಿಧಾನ್ಯಗಳ ಖೀರ್ ಮತ್ತು ಸೂಪು, ಜತೆಗೆ ಸ್ಥಳೀಯವಾಗಿ ಜನಪ್ರಿಯ ಭಕ್ಷ್ಯಗಳೆನಿಸಿದ ತಂದೂರಿ ಮೀನು, ಆಡಿನಮರಿ ಚಾಪ್ಸ್, ಬಟರ್‌ ಚಿಕನ್‌, ಹೈದರಾಬಾದ್ ಗೋಷ್ಟ್ ಬಿರಿಯಾನಿ, ಅವಧಿ ಮುರ್ಘ್ ಕೂರ್ಮಾ, ತೆಂಗಿನಕಾಯಿ ಪಾಯಸ, ಮಲೈ ಕೋಫ್ತಾ ಇತ್ಯಾದಿ ಸಜ್ಜಾಗಿವೆ ಎಂದು ಜಿ 20 ಸಂಘಟಿಸುವಲ್ಲಿ ತೊಡಗಿರುವ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT