ನಾಗ್ಪುರ: ‘ನೀವು ಪ್ರಧಾನಿಯಾಗುವುದಾದರೆ ನಾವು ನಿಮಗೆ ಬೆಂಬಲ ನೀಡುತ್ತೇವೆ’ ಎಂದು ಲೋಕಸಭಾ ಚುನಾವಣೆ ವೇಳೆ ರಾಜಕೀಯ ನಾಯಕರೊಬ್ಬರು ನನಗೆ ಭರವಸೆ ನೀಡಿದ್ದು, ಅವರ ಪ್ರಸ್ತಾಪವನ್ನು ನಾನು ನಿರಾಕರಿಸಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಹುದ್ದೆಗಾಗಿ ನಾನು ರಾಜಿ ಮಾಡಿಕೊಳ್ಳುಲು ಹೋಗುವುದಿಲ್ಲ ಎಂದರು.
‘ನನಗೆ ಒಂದು ಘಟನೆ ನೆನಪಿದೆ...ನಾನು ಯಾರನ್ನು ಇಲ್ಲಿ ಹೆಸರಿಸುವುದಿಲ್ಲ.. ವ್ಯಕ್ತಿಯೊಬ್ಬರು ‘ನೀವು ಪ್ರಧಾನಿಯಾಗಲು ಬಯಸಿದರೆ ನಾವು ನಿಮ್ಮನ್ನು ಬೆಂಬಲಿಸುತ್ತೇವೆ’ ಎಂದು ನನಗೆ ಹೇಳಿದರು. ನೀವು ನನ್ನನ್ನು ಏಕೆ ಬೆಂಬಲಿಸಬೇಕು ಮತ್ತು ನಾನು ನಿಮ್ಮ ಬೆಂಬಲವನ್ನು ಏಕೆ ತೆಗೆದುಕೊಳ್ಳಬೇಕು ಎಂದು ನಾನು ಅವರನ್ನೇ ಪ್ರಶ್ನಿಸಿದೆ’ ಎಂದರು.
‘ಪ್ರಧಾನಿಯಾಗುವುದು ನನ್ನ ಜೀವನದ ಗುರಿಯಲ್ಲ. ನನ್ನ ತತ್ವಗಳಿಗೆ ಮತ್ತು ಪಕ್ಷಕ್ಕೆ ನಾನು ನಿಷ್ಠನಾಗಿದ್ದೇನೆ. ನಾನು ನಂಬಿದ ತತ್ವಗಳು ನನಗೆ ಮುಖ್ಯವಾಗಿದ್ದು, ಯಾವುದಕ್ಕೂ ರಾಜಿ ಮಾಡಿಕೊಳ್ಳಲು ಹೋಗುವುದಿಲ್ಲ’ ಎಂದು ಹೇಳಿದರು.
‘ನಾಲ್ಕು ಆಧಾರ ಸ್ತಂಭಗಳಾದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ’ ಎಂದು ಇದೇ ವೇಳೆ ತಿಳಿಸಿದರು.