ಅಹಮದಾಬಾದ್: ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿ ಪಟ್ಟಣದ ಮನೆಯೊಂದರಲ್ಲಿ ಕಾರ್ಯಾಚರಿಸುತ್ತಿದ್ದ ಮಾದಕವಸ್ತು ತಯಾರಿಕಾ ಘಟಕವನ್ನು ಪತ್ತೆ ಮಾಡಿರುವ ಗುಜರಾತ್ ಭಯೋತ್ಪಾದನಾ ನಿಗ್ರಹದ ದಳದ (ಎಟಿಎಸ್) ಅಧಿಕಾರಿಗಳು, ಇಬ್ಬರನ್ನು ಬಂಧಿಸಿದ್ದಾರೆ.
ಅಧಿಕಾರಿಗಳು ₹800 ಕೋಟಿ ಮೌಲ್ಯದ 793 ಕೆ.ಜಿ. ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಮಹಮ್ಮದ್ ಯೂನಸ್ ಅಲಿಯಾಸ್ ಎಜಾಜ್ ಮತ್ತು ಮಹಮ್ಮದ್ ಆದಿಲ್ ಶೇಖ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮುಂಬೈನ ಡೊಂಗರಿ ನಿವಾಸಿಗಳು.
ಎಟಿಎಸ್ ಅಧಿಕಾರಿಗಳು ಜೂನ್ ತಿಂಗಳಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಮೆಫೆಡ್ರೋನ್ (ಒಂದು ಬಗೆಯ ಮಾದಕವಸ್ತು) ತಯಾರಿಕಾ ಜಾಲವನ್ನು ಪತ್ತೆಮಾಡಿದ್ದರು. ಅಲ್ಲಿ ಮೂವರನ್ನು ಬಂಧಿಸಲಾಗಿತ್ತು. ಈ ಮೂವರ ವಿಚಾರಣೆಯ ಸಂದರ್ಭದಲ್ಲಿ ಯೂನಸ್ ಮತ್ತು ಶೇಖ್ ಬಗ್ಗೆ ಮಾಹಿತಿ ಸಿಕ್ಕಿತ್ತು.