ವಡೋದರ: ಗುಜರಾತ್‌ನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆ ವಡೋದರದಲ್ಲಿ 3 ದಿನಗಳ ಅಂತರದಲ್ಲಿ ಜನವಸತಿ ಪ್ರದೇಶಕ್ಕೆ ಬಂದ 24 ಮೊಸಳೆಗಳನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಅಜ್ವಾ ಜಲಾಶಯದಿಂದ ನೀರು ಬಿಟ್ಟ ಪರಿಣಾಮ ವಡೋದರ ಬಳಿ ಹರಿಯುತ್ತಿರುವ ವಿಶ್ವಾಮಿತ್ರಿ ನದಿಯಲ್ಲಿ (Vishwamitri river) ನೀರಿನ ಪ್ರಮಾಣ ಹೆಚ್ಚಳವಾಗಿದೆ. ಪ್ರವಾಹ ಪರಿಸ್ಥಿತಿ ಎದುರಾದ ಕಾರಣ ಮೊಸಳೆಗಳು ಜನವಸತಿ ಪ್ರದೇಶಕ್ಕೆ ಬಂದಿವೆ. ಈ ನದಿ 440ಕ್ಕೂ ಹೆಚ್ಚು ಮೊಸಳೆಗಳಿಗೆ ಆವಾಸಸ್ಥಾನವಾಗಿದೆ. ಮೊಸಳೆಗಳ ಹೊರತಾಗಿ 75 ಹಾವುಗಳು, ಆಮೆ ಸೇರಿ ಹಲವು ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಸ್ಥಳೀಯರಿಗೆ ಮೊಸಳೆಗಳು ಬರುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಅದೃಷ್ಟವಶಾತ್, ಮೊಸಳೆಗಳಿಂದ ಇದುವರೆಗೂ ಯಾರಿಗೂ ಹಾನಿಯಾಗಿಲ್ಲ. ಸಾಮಾನ್ಯವಾಗಿ ಮೊಸಳೆಗಳು ಮನುಷ್ಯರ ಮೇಲೆ ದಾಳಿ ನಡೆಸುವುದಿಲ್ಲ, ನದಿಯಲ್ಲಿ ಮೀನು ಸೇರಿ ಇನ್ನಿತರ ಪ್ರಾಣಿಗಳನ್ನು ತಿನ್ನುತ್ತವೆ. ನದಿಯಿಂದ ಹೊರಬಂದರೆ ನಾಯಿ, ಹಂದಿಯಂತಹ ಸಣ್ಣ ಪ್ರಾಣಿಗಳನ್ನು ತಿನ್ನುತ್ತವೆ. ಸದ್ಯ ರಕ್ಷಿಸಲಾಗಿರುವ ಎಲ್ಲಾ ಪ್ರಾಣಿಗಳನ್ನು ನೀರಿಗೆ ಬಿಡಲಾಗಿದೆ. ವಿಶ್ವಾಮಿತ್ರಿ ನದಿ ನೀರಿನ ಮಟ್ಟ ಏರಿಕೆಯಲ್ಲಿಯೇ ಇದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.