ಚಂಡೀಗಢ: ಜನರ ಆಶೀರ್ವಾದದಿಂದಲೇ ಪ್ರತಿಯೊಂದು ಹೋರಾಟವನ್ನು ಗೆಲ್ಲುತ್ತೇನೆ ಎಂದು ಕುಸ್ತಿಪಟು ಹಾಗೂ ಹರಿಯಾಣದ ವಿಧಾನಸಭೆ ಚುನಾವಣೆಗೆ ಜುಲಾನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಹೇಳಿದ್ದಾರೆ.
ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಜುಲಾನಾಗೆ ಬಂದ ವಿನೇಶ್‌ಗೆ ಭರ್ಜರಿ ಸ್ವಾಗತ ಲಭಿಸಿತು. ಹಿರಿಯರು, ಮಹಿಳೆಯರು, ವಿವಿ ಖಾಪ್‌ಗಳ ಸದಸ್ಯರು ಹಾರ ಹಾಕಿ ಸ್ವಾಗತಿಸಿದರು. ತಮ್ಮ ಆಶೀರ್ವಾದ ನೀಡಿದರು.
ಅವರ ಕಾರಿನ ಸುತ್ತ ನೆರೆದಿದ್ದ ಸಾವಿರಾರು ಮಂದಿ ‘ವಿನೇಶ್ ಫೋಗಟ್ ಜಿಂದಾಬಾದ್’ ಎಂದು ಘೋಷಣೆ ಮೊಳಗಿಸಿದರು. ಡೋಲು ಬಾರಿಸಿ ಸ್ವಾಗತ ಕೋರಿದರು.
ಭಾರತ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬ್ರಿಜ್ ಭೂಷಣ್ ನನ್ನ ದೇಶವಲ್ಲ. ನನ್ನ ದೇಶ ನನ್ನ ಜೊತೆಗೆ ನಿಂತಿದೆ. ನನ್ನ ಪ್ರೀತಿಪಾತ್ರರು ನನ್ನ ಜೊತೆ ಇದ್ದಾರೆ. ನನಗೆ ಅವರೇ ಮುಖ್ಯ’ ಎಂದು ಹೇಳಿದ್ದಾರೆ.
ಭಾರತ ಕುಸ್ತಿ ಫೆಡರೇಶನ್‌ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹಾಗೂ ಬಿಜೆಪಿ ವಿರುದ್ಧ ದಾಳಿ ಮಾಡಲು ಪೋಗಟ್ ಹಾಗೂ ಪೂನಿಯಾ ಅವರನ್ನು ಕಾಂಗ್ರೆಸ್ ಕಾಲಾಳುಗಳನ್ನಾಗಿ ಬಳಸಿಕೊಂಡಿತು ಎಂದು ಬ್ರಿಜ್ ಭೂಷಣ್ ಶನಿವಾರ ಆರೋಪಿಸಿದ್ದರು.
‘ನನ್ನ ಪ್ರೀತಿ ಪಾತ್ರರು ನನಗೆ ಬೆಂಬಲ ನೀಡಿದ್ದಾರೆ. ಅವರಿಂದ ಕುಸ್ತಿಯಲ್ಲಿ ಗೆಲುವು ಸಾಧಿಸಿದ್ದೇನೆ. ಅವರು ರಾಜಕೀಯದಲ್ಲೂ ನನಗೆ ಬೆಂಬಲ ನೀಡಲಿದ್ದಾರೆ. ಅವರ ಆಶೀರ್ವಾದದೊಂದಿಗೆ ನಾವು ಎಲ್ಲಾ ಹೋರಾಟಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಅವರ ನೋವನ್ನು ಕಡಿಮೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ’ ಎಂದು ಹೇಳಿದ್ದಾರೆ.
ನನಗೀಗ 30 ವರ್ಷ. ನಾನು ಹಲವು ಸವಾಲುಗಳನ್ನು ಎದುರಿಸಿದ್ದೇನೆ. ಜನರ ಬೆಂಬಲ ಇದ್ದರೆ ಎಂಥ ಸಮಸ್ಯೆ ಬೇಕಾದರೂ ಮೆಟ್ಟಿ ನಿಲ್ಲಬಹುದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.