ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಗೆ ಜನನಾಯಕ ಜನತಾ ಪಕ್ಷ ಮತ್ತು ಆಜಾದ್ ಸಮಾಜ ಪಕ್ಷದ ಮೈತ್ರಿಕೂಟವು 34 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬಿಜೆಪಿ ತೊರೆದ ಮಾಜಿ ಸಚಿವ ರಂಜಿತ್ ಸಿಂಗ್ ಚೌಟಾಲಾ ಅವರಿಗೆ ರಾನಿಯಾ ವಿಧಾನಸಭಾ ಕ್ಷೇತ್ರದಲ್ಲಿ ಬೆಂಬಲ ನೀಡಲು ಎರಡೂ ಪಕ್ಷಗಳು ನಿರ್ಧರಿಸಿವೆ.
ರಂಜಿತ್ ಚೌಟಾಲಾ ಈ ಹಿಂದೆ ರಾನಿಯಾದಿಂದ ಸ್ವತಂತ್ರ ಶಾಸಕರಾಗಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದ ಅವರು ಹಿಸ್ಸಾರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು.
ಬಿಜೆಪಿ ತೊರೆದಿರುವ ಅವರು ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ.
ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಂತೆ ಜನನಾಯಕ ಜನತಾ ಪಕ್ಷ ಮತ್ತು ಆಜಾದ್ ಸಮಾಜ ಪಕ್ಷದ ಮೈತ್ರಿಕೂಟವು ಬಿಡುಗಡೆ ಮಾಡಿದ 18 ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ, ಜೆಜೆಪಿ 15 ಮತ್ತು ಎಎಸ್‌ಪಿ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಸಂಜೆ ಜೆಜೆಪಿ ತನ್ನ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿ ಇನ್ನೂ 10 ಅಭ್ಯರ್ಥಿಗಳನ್ನು ಹೆಸರಿಸಿದೆ.
ತಡರಾತ್ರಿ ಬಿಡುಗಡೆಯಾದ ಮತ್ತೊಂದು ಪಟ್ಟಿಯಲ್ಲಿ ಆರು ಅಭ್ಯರ್ಥಿಗಳ ಪೈಕಿ ತಲಾ ಮೂವರು ಜೆಜೆಪಿ ಮತ್ತು ಎಎಸ್‌ಪಿಯವರಾಗಿದ್ದಾರೆ.
ಐಎನ್‌ಎಲ್‌ಡಿಯ ಹಾಲಿ ಶಾಸಕ ಮತ್ತು ಹಿರಿಯ ನಾಯಕ ಅಭಯ್ ಸಿಂಗ್ ಚೌಟಾಲಾ ಮರುಆಯ್ಕೆ ಬಯಸುತ್ತಿರುವ ಎಲೆನಾಬಾದ್‌ನಿಂದ ಜೆಜೆಪಿ ಅಂಜಲಿ ಅವರನ್ನು ಕಣಕ್ಕಿಳಿಸಿದೆ.