ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ ಸಮಸ್ಯೆ: ಪ್ರಚಾರ ನಡೆಸುವುದಿಲ್ಲ- ಗುಲಾಂ ನಬಿ ಆಜಾದ್‌

ಗುಲಾಂ ನಬಿ ಆಜಾದ್‌ ನಿರ್ಧಾರ * ಪಕ್ಷದ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯಬಹುದು ಎಂದ ನಾಯಕ
Published 28 ಆಗಸ್ಟ್ 2024, 14:35 IST
Last Updated 28 ಆಗಸ್ಟ್ 2024, 14:35 IST
ಅಕ್ಷರ ಗಾತ್ರ

ನವದೆಹಲಿ: ಆರೋಗ್ಯ ಸಮಸ್ಯೆಯಿಂದಾಗಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಡೆಮಾಕ್ರಟಿಕ್‌ ಪ್ರೊಗ್ರೆಸಿವ್‌ ಆಜಾದ್‌ ಪಾರ್ಟಿ (ಡಿಪಿಎಪಿ) ಮುಖ್ಯಸ್ಥ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ. ತಮ್ಮ ಅನುಪಸ್ಥಿತಿಯ ಕಾರಣ, ಪಕ್ಷದ ಅಭ್ಯರ್ಥಿಗಳು ಬೇಕಿದ್ದರೆ ಚುನಾವಣಾ ಕಣದಿಂದ ಹಿಂದೆ ಸರಿಯಬಹುದು ಎಂದೂ ಹೇಳಿದ್ದಾರೆ.

ಇತ್ತೀಚೆಗಷ್ಟೇ ಆಜಾದ್‌ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರು. ಶ್ರೀನಗರದಲ್ಲಿ ಇರುವ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಮರುದಿನವೇ ದೆಹಲಿಗೆ ಬಂದ ಅವರು ಏಮ್ಸ್‌ನಲ್ಲಿ ಎರಡು ದಿನ ಚಿಕಿತ್ಸೆ ಪಡೆದುಕೊಂಡಿದ್ದರು. ರಕ್ತದೊತ್ತಡ ಅಧಿಕವಾಗಿರುವ ಕಾರಣ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಆಜಾದ್‌ ಅವರಿಗೆ ವೈದ್ಯರು ಸಲಹೆ ನೀಡಿದ್ದಾರೆ. ಈ ಕಾರಣದಿಂದಲೇ ಅವರು ಪ್ರಚಾರದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯು ಘೋಷಣೆಗೊಂಡ ಬಳಿಕ, ಆಜಾದ್‌ ಪಕ್ಷವು ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲಿದೆ ಎಂಬ ವದಂತಿಯು ದಟ್ಟವಾಗಿ ಹಬ್ಬಿತ್ತು. ಆದರೆ, ಇದು ಕೇವಲ ವದಂತಿ ಅಷ್ಟೆ ಎಂದು ಆಜಾದ್‌ ಪಾರ್ಟಿಯು ಸ್ಪಷ್ಟನೆ ನೀಡಿತ್ತು.

ಆಜಾದ್‌ ನಿರೀಕ್ಷೆ ಹುಸಿಗೊಳಿಸಿದ ಪಕ್ಷದ ಬೆಳವಣಿಗೆ

2022ರ ಸೆಪ್ಟೆಂಬರ್‌ನಲ್ಲಿ ಆಜಾದ್‌ ಅವರು ಈ ಪಕ್ಷವನ್ನು ಸ್ಥಾಪಿಸಿದ್ದರು. ಎರಡು ವರ್ಷಗಳ ಬಳಿಕವೂ ಪಕ್ಷವು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರೀಕ್ಷಿತ ಬೆಳವಣಿಗೆ ಸಾಧಿಸಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಶ್ಮೀರದ ಎರಡು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳು 50 ಸಾವಿರವನ್ನೂ ದಾಟಲಿಲ್ಲ. ಆಜಾದ್‌ ಜೊತೆಯಲ್ಲಿ ಕಾಂಗ್ರೆಸ್‌ ತೊರೆದು ಅವರ ಹೊಸ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಹಲವು ನಾಯಕರೂ ಈಗ ಈ ಪಕ್ಷವನ್ನು ತೊರೆಯುತ್ತಿದ್ದಾರೆ. ಇವರಲ್ಲಿ ಹಲವರು ಈಗ ಮತ್ತೆ ಕಾಂಗ್ರೆಸ್‌ ಸೇರಿಕೊಂಡಿದ್ದಾರೆ. ಕಾರ್ಯಕರ್ತರೂ ಪಕ್ಷದಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ. ಇವೆಲ್ಲವೂ ಲೋಕಸಭಾ ಚುನಾವಣೆಯಲ್ಲಿನ ಪಕ್ಷದ ಕಳಪೆ ಪ್ರದರ್ಶನದ ಕಾರಣದಿಂದಾಗಿಯೇ ಘಟಿಸುತ್ತಿವೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT